ಬೆಂಗಳೂರು: ವರ್ಕ್ ಫ್ರಂ ಹೋಮ್ ಪದ್ಧತಿಯಿಂದ ಅಬಕಾರಿ ಇಲಾಖೆಗೆ ತೀವ್ರ ನಷ್ಟ ಉಂಟಾಗುತ್ತಿರುವ ಪರಿಣಾಮ ಅದನ್ನು ರದ್ದುಗೊಳಿಸುವಂತೆ ಪ್ರಧಾನಿಗೆ ಮನವಿ ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ.
ಅಬಕಾರಿ ಸಚಿವ ಹೆಚ್.ನಾಗೇಶ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಅಬಕಾರಿ ಸಿಬ್ಬಂದಿ ಸೇವೆಯನ್ನು ತ್ವರಿತಗೊಳಿಸಲು ದ್ವಿಚಕ್ರ ವಾಹನ ನೀಡುವುದು, ಅಬಕಾರಿ ಗಾರ್ಡ್ಸ್ ಮತ್ತು ಅಬಕಾರಿ ಹಿರಿಯ ಗಾರ್ಡ್ಸ್ ಹುದ್ದೆಗಳ ಪದನಾಮ ಬದಲಾಯಿಸಿ ಅಬಕಾರಿ ಪೇದೆ ಮತ್ತು ಅಬಕಾರಿ ಮುಖ್ಯ ಪೇದೆ ಎಂದು ಬದಲಾಯಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ...ರಫ್ತು ವಹಿವಾಟಿನಲ್ಲಿ ಸಿಎಂ ಯೋಗಿ ರಾಜ್ಯಕ್ಕೆ 5ನೇ ಸ್ಥಾನ: ಕರ್ನಾಟಕಕ್ಕೆ ಯಾವ ಶ್ರೇಣಿ?
ರಾಜ್ಯದಲ್ಲಿ ಅಬಕಾರಿ ಆದಾಯ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪರವಾನಗಿ ಹೊಂದಿರುವ ಅಂಗಡಿಗಳಿಂದ ಬರುವ ಆದಾಯ ಪ್ರಮಾಣದ ಬಗ್ಗೆ ಮರು ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಹೆಚ್ಚಿನ ತಪಾಸಣೆ ನಡೆಸಿ ದಂಡ ವಿಧಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಅಬಕಾರಿ ಸಚಿವ ಹೆಚ್.ನಾಗೇಶ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆ ಅಬಕಾರಿ ನಿಯಮ ಪಾಲಿಸುವವರಿಗೆ ಸಿಎಲ್-7 ಪರವಾನಗಿ ನೀಡುವುದು, ಅಬಕಾರಿ ಇನ್ಸ್ಪೆಕ್ಟರ್ಗಳಿಗೆ ಮೊಬೈಲ್ ಫೋನ್ ಒದಗಿಸುವುದು, ಗುಡ್ಡಗಾಡು ಪ್ರದೇಶದಲ್ಲಿ ಬಳಕೆಗೆ ಅನುಕೂಲವಾಗುವಂತೆ ಜೀಪ್, ಬೊಲೆರೋ ಮಾದರಿ ವಾಹನಗಳನ್ನು ಒದಗಿಸುವುದು, ಇಲಾಖೆಗೆ ಸಂಬಂಧಿಸಿದ ವಾಹನಗಳನ್ನು ವ್ಯವಸ್ಥಿತ ರೀತಿಯಲ್ಲಿ ಬಳಸಿಕೊಳ್ಳುವುದು, ಉಪಯೋಗಕ್ಕೆ ಬಾರದ ವಾಹನಗಳ ಮಾರಾಟವನ್ನು ವ್ಯವಸ್ಥಿತವಾಗಿ ಮಾಡುವುದು. ₹150 ಕೋಟಿ ವೆಚ್ಚದಲ್ಲಿ ಅಬಕಾರಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.