ಬೆಂಗಳೂರು:ಕಳೆದ ಮೂರು ದಿನದಿಂದ ಮಹದಾಯಿ ನೀರಿಗಾಗಿ ಅಹೋರಾತ್ರಿ ಧರಣಿ ನಡೆಸಿದ್ದ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಕಡೆಗೂ ರೈತರ ಮನವಿಗೆ ಸ್ಪಂದಿಸಿರುವ ರಾಜ್ಯಪಾಲ ವಜುಭಾಯ್ ವಾಲಾ, ತಮ್ಮ ಕಚೇರಿಯ ಸಿಬ್ಬಂದಿ ಕೈಯಲ್ಲಿ ಮನವಿ ಸ್ವೀಕರಿಸಿದ್ದಾರೆ.
ಬಳಿಕ ಮಾತನಾಡಿದ ರೈತ ಮುಖಂಡ ವೀರೇಶ್ ಸೊಬರದಮಠ, ರಾಜ್ಯಪಾಲರ ಅಧಿಕಾರಿಗಳು ನಮ್ಮ ಮನವಿ ಸ್ವೀಕರಿಸಿ, ಸಹಿ ಹಾಕಿದ್ದಾರೆ. ಸ್ವಲ್ಪ ಸಮಯದಲ್ಲಿ ಉತ್ತರ ಬಾರದಿದ್ದರೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ ಉತ್ತರ ಪಡೆಯುತ್ತೇವೆ ಎಂದರು.
ಅಲ್ಲದೆ ಇವತ್ತು ನಾವು ಹೋರಾಟ ಹಿಂದೆ ತೆಗೆದುಕೊಂಡಿದ್ದು ಉಪ ಮುಖ್ಯಮಂತ್ರಿ ಬಂದಿರುವುದಕ್ಕಲ್ಲ. ಅವರನ್ನು ನಾವು ಕರೆದೂ ಇಲ್ಲಾ. ಮಹದಾಯಿ ಹೆಸರಿನಲ್ಲಿ ಈಗಾಗ್ಲೇ 3 ಪಕ್ಷದವರು ಲೂಟಿ ಮಾಡಿದ್ದಾರೆ. ತಿಂದು ತೇಗಿದ್ದಾರೆ. ಉ.ಕ ಶಾಸಕರು, ಸಂಸದರು ನಾವು ಪ್ರಶ್ನೆ ಮಾಡಿದ್ರೆ ಹೊಡೆಸ್ತಿರಾ, ಕೊಲ್ಲಿಸ್ತಿರಾ ಎಂದರು.
ಪೊಲೀಸರು ಅಧಿಕಾರಿಗಳನ್ನು ಭೇಟಿ ಮಾಡಿಸಲು ಶ್ರಮಿಸಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ್ರೆ ನಮಗೆ ನ್ಯಾಯ ಸಿಗುವ ಭರವಸೆ ಇತ್ತು. ನಮ್ಮ ಮುಖ ನೋಡಿದಾಗ ನಮ್ಮ ನೋವು ಅರ್ಥ ಆಗುತ್ತೆ ಅಂದುಕೊಂಡಿದ್ವಿ. ಕಾಲು ಹಿಡಿದುಕೊಳ್ಳಬೇಕು ಅಂದುಕೊಂಡಿದ್ವಿ. ಅವರು ಭೇಟಿ ಮಾಡದೇ ಇದ್ರೂ ಪರವಾಗಿಲ್ಲ. ಅವರ ಮೇಲೆ ನಮಗೆ ಬೇಜಾರಿಲ್ಲ. ರಾಜ್ಯಪಾಲರ ಸಂವಿಧಾನಾತ್ಮಕ ಹುದ್ದೆಗೆ ಗೌರವ ಕೊಡುತ್ತೇವೆ ಎಂದರು.
ಇಂದು ಬೆಳಗ್ಗೆ ಪತ್ರ ಬರೆದಾಗ ರಾಜ್ಯಪಾಲರು ಸಿಗುವುದಿಲ್ಲ ಎಂಬ ಉತ್ತರ ಸಿಕ್ಕಿತು ಎಂದರು. ಈಗ ಊಟ ಮಾಡಿ 6 ಗಂಟೆ ಟ್ರೈನ್ಗೆ ನಾವು ಹೊರಡುತ್ತೇವೆ ಎಂದರು.
ಪ್ರತಿಭಟನೆ ಕೈಬಿಡಲು ಕಾರಣವೇನು?
- ರಾಜ್ಯಪಾಲರ ಭೇಟಿ ಸಾಧ್ಯವಾಗಲ್ಲ ಎಂಬುದು ಖಚಿತವಾಗಿದ್ದು
- ಪೊಲೀಸ್ ಆಯುಕ್ತರು ಕೂಡ ರಾಜ್ಯಪಾಲರ ಭೇಟಿ ಸಾಧ್ಯವಿಲ್ಲ ಎಂಬುದನ್ನ ಖಚಿತಪಡಿಸಿದ್ರು
- ಗಡಿ ಹಾಗೂ ನದಿ ರಕ್ಷಣಾ ಆಯೋಗದ ಅಧ್ಯಕ್ಷರು ಮಹದಾಯಿ ಅಧಿಸೂಚನೆ ಪ್ರಕಟ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದು
- ಕೇಂದ್ರ ಸರ್ಕಾರವೇ ಮಹದಾಯಿ ನ್ಯಾಯಾಧಿಕರಣದ ತೀರ್ಪಿನಂದ ನೀರು ಬಿಡಬೇಕಾಗಿದ್ದು, ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.