ಬೆಂಗಳೂರು: 'ಈ ಚುನಾವಣೆ ಧರ್ಮ ಯುದ್ಧ. ಮತದಾರ ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದ ಮುಕ್ತಗೊಳಿಸಬೇಕು' ಎಂದು ಆರ್ಆರ್ನಗರದ ಮತದಾರರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿನಂತಿಸಿಕೊಂಡಿದ್ದಾರೆ.
ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಜಾಲಹಳ್ಳಿ ವಾರ್ಡ್‌ನಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಪರ ಬೃಹತ್ ರೋಡ್ ಶೋ ನಡೆಸಿದರು.
ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, 'ಈ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು, ನಿಮ್ಮ ಕಷ್ಟಕ್ಕೆ ಧ್ವನಿಯಾಗಲು, ಕಾಂಗ್ರೆಸ್ ಪಕ್ಷದಿಂದ ಯುವ, ವಿದ್ಯಾವಂತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಇಂದು ನಾನು, ನಮ್ಮ ವಿರೋಧ ಪಕ್ಷದ ನಾಯಕರು, ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದೇವೆ. ಈ ಚುನಾವಣೆ ರಾಜಕಾರಣದ ಧರ್ಮ ಹಾಗೂ ಅಧರ್ಮದ ನಡುವಣ ಯುದ್ಧ.
ಒಂದು ಪಕ್ಷದಲ್ಲಿ ಗೆದ್ದು, ಆ ಪಕ್ಷ ಹಾಗೂ ಮತದಾರರನ್ನು ಕೇಳದೇ ಅವರು ಕೊಟ್ಟ ಮತ ಹಾಗೂ ಸ್ಥಾನವನ್ನು ಮಾರಿಕೊಂಡಿರುವುದು ರಾಜಕಾರಣದ ಅಧರ್ಮ. ಒಂದು ವ್ಯಕ್ತಿಯ ಸ್ವಾರ್ಥಕ್ಕಾಗಿ ಇಂದು ಈ ಚುನಾವಣೆಯ ನಡೆಯುತ್ತಿದೆ.ಈ ಚುನಾವಣೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೀವು ಗಮನಿಸುತ್ತಿದ್ದೀರಿ. ಈ ಹಿಂದೆ ನಾನು ಸೇರಿದಂತೆ ಕೆಲವು ತಪ್ಪಿಗೆ ಕಾರಣಕರ್ತನಾಗಿದ್ದೇವೆ ಎಂದರು.
ಸುಳ್ಳು ಪ್ರಕರಣಗಳ ವಿರುದ್ಧ ಹೋರಾಟ:ನಿನ್ನೆ ಸಂಜೆ ಜ್ಞಾನಭಾರತಿ ಪಕ್ಕ ಕಾರ್ಪೊರೇಟರ್ ಮೋಹನ್ ಕುಮಾರ್ ಅವರ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಎಲೆಕ್ಟ್ರಿಸಿಟಿ ಕಂಟ್ರಾಕ್ಟರ್ ಅವರ ಪುತ್ರ ಪ್ರೇಮ್ ಕುಮಾರ್ ಎಂಬ 21 ವರ್ಷದ ಹುಡುಗ ತನ್ನ ಸ್ನೇಹಿತರ ಜತೆ ತುಳಸಿ ಮುನಿರಾಜು ಅವರ ಫೋಟೋ ಹಾಕಿಕೊಂಡು ಟೂರ್ನಿ ಆಯೋಜನೆ ಮಾಡಿದ್ದಕ್ಕೆ ಅವರ ಮೇಲೆ ಕೇಸು ಹಾಕಿದ್ದಾರಂತೆ. ತನ್ನ ಮಗ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಕ್ಕೆ ಈ ಶಿಕ್ಷೆನಾ ಅಂತಾ ಅವರ ತಂದೆ ಕೊರಗುತ್ತಿದ್ದಾರೆ ಎಂದು ತಿಳಿಸಿದರು.
ನಾವು ಮುಂದಿನ ದಿನಗಳಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಈ ಕ್ಷೇತ್ರದಲ್ಲಿ ದ್ವೇಷದಿಂದ ಹಾಕಲಾಗಿರುವ ಕೇಸ್‌ಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಯುವಕರು, ಎಲ್ಲ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಕಿರುವ ಕೇಸುಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.