ಬೆಂಗಳೂರು: ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇದೀಗ ಈ ಆದೇಶವನ್ನು ವಾಪಸ್ ಪಡೆದಿದೆ. ಈಗಾಗಲೇ ಶಾಲೆಗಳಲ್ಲಿ ಪಠ್ಯ ಬೋಧನೆ ಆಗಿ ಹೋಗಿದೆ. ಪೋಷಕರು, ಮಕ್ಕಳು ಇದೇ ಪಠ್ಯ ಮುಂದುವರಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಎಂದಿನಂತೆ ಪಠ್ಯವನ್ನು ಮುಂದುವರೆಸಲು ಪರಿಷ್ಕೃತ ಆದೇಶದಲ್ಲಿ ಸೂಚಿಸಲಾಗಿದೆ.
2022-23 ನೇ ಸಾಲಿನ 1 ರಿಂದ 10 ನೇ ತರಗತಿ ಕನ್ನಡ ಭಾಷಾ ಪಠ್ಯವನ್ನು ಸರ್ಕಾರ ಪರಿಷ್ಕರಿಸಿತ್ತು. ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ದೇವನೂರು ಮಹಾದೇವ ಸೇರಿ 7 ಲೇಖಕರು ತಾವು ಪಠ್ಯಕ್ಕಾಗಿ ನೀಡಿದ್ದ ಗದ್ಯ-ಪದ್ಯವನ್ನು ಕೈ ಬಿಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಆ ಪಠ್ಯವನ್ನು ಕೈಬಿಟ್ಟು ಆದೇಶ ಹೊರಡಿಸಿತ್ತು.
ಆದರೆ ಈ ಪಠ್ಯವನ್ನು ಶಿಕ್ಷಕರು ಬೋಧಿಸಿದ್ದು, ಮಕ್ಕಳೂ ಅಭ್ಯಾಸ ಮಾಡಿದ್ದರು. ಹೀಗಾಗಿ ಈ ಮೊದಲಿನ ಆದೇಶ ಹಿಂಪಡೆದು ಪ್ರಸಕ್ತ ಸಾಲಿಗೆ ಸೀಮಿತವಾಗಿ ಈ ಮೊದಲಿನಂತೆಯೇ ಪಠ್ಯ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.
ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಹೊರಡಿಸಿದ್ದ ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ ಇನ್ನು ಶಾಲೆಗಳು ಆರಂಭವಾಗಿ ಏಳು ತಿಂಗಳು ಕಳೆದಿದ್ದು, ಈಗ ಪಠ್ಯ ಬದಲಿಸಿ ಹೊಸ ಪುಸ್ತಕ ಮುದ್ರಿಸುವುದು ಸಾಕಷ್ಟು ವಿಳಂಬವಾಗಲಿದೆ. ಹೊಸ ಪಾಠದ ಸರಿಯಾದ ಕಲಿಕೆ ಆಗದಿದ್ದರೆ ಕಷ್ಟ. ಇದರಿಂದ ಕಲಿಕೆ ಹಾಗೂ ಮುಂದಿನ ಪರೀಕ್ಷೆಗೆ ಪರಿಗಣಿಸುವಂತೆ ಹಾಗೂ ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.
ಏನಾಗಿತ್ತು? : ಲೇಖಕ ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ ಏಳು ಲೇಖಕರು ತಮ್ಮ ಪಠ್ಯ ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ಹಿನ್ನೆಲೆ ಪಠ್ಯವನ್ನು ಕೈಬಿಟ್ಟಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಈ ಲೇಖಕರು ಅನುಮತಿ ಹಿಂಪಡೆದಿರುವ ಹಿನ್ನೆಲೆ ಪಠ್ಯದಲ್ಲಿದ್ದ ಈ ಸಾಹಿತಿಗಳ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿತ್ತು.
10ನೇ ತರಗತಿಯ ಪಠ್ಯದಲ್ಲಿನ (ಪ್ರಥಮ ಭಾಷೆ) ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಗದ್ಯ, ಜಿ.ರಾಮಕೃಷ್ಣ ಅವರ 'ಭಗತ್ ಸಿಂಗ್' ಪೂರಕ ಗದ್ಯ, 9ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ರೂಪ ಹಾಸನ ಅವರ 'ಅಮ್ಮನಾಗುವುದೆಂದರೆ' ಪೂರಕ ಪದ್ಯ 10ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ಈರಪ್ಪ ಎಂ.ಕಂಬಳಿ ಅವರ 'ಹೀಗೊಂದು ಬಸ್ ಪ್ರಯಾಣ' ಪೂರಕ ಗದ್ಯ, ಸತೀಶ್ ಕುಲಕರ್ಣಿ ಅವರ 'ಕಟ್ಟುತ್ತೇವೆ ನಾವು' ಪದ್ಯ, 10ನೇ ತರಗತಿ ಪಠ್ಯದಲ್ಲಿನ (ದ್ವಿತೀಯ ಭಾಷೆ) ಸುಕನ್ಯ ಮಾರುತಿ ಅವರ 'ಏಣಿ' ಪದ್ಯ, 6ನೇ ತರಗತಿ ಪಠ್ಯದಲ್ಲಿನ (ಪ್ರಥಮ ಭಾಷೆ) ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ 'ಡಾ.ರಾಜ್ಕುಮಾರ್' ಗದ್ಯಗಳನ್ನು ಪರಿಗಣಿಸದಂತೆ ಶಿಕ್ಷಣ ಇಲಾಖೆ ತಿಳಿಸಿತ್ತು.
ಪಠ್ಯಪರಿಶೀಲನೆಗೆ ರಚಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾಹಿತಿಗಳು ತಮ್ಮ ಪಠ್ಯವನ್ನು ಕೈಬಿಡುವಂತೆ ಕೋರಿದ್ದರು. ಈ ಸಂಬಂಧ ಪತ್ರ ಸಹ ಬರೆದಿದ್ದರು, ಗದ್ಯ ಮತ್ತು ಪದ್ಯಗಳನ್ನು ಪಠ್ಯದಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ಈ ಲೇಖಕರ ಅನುಮತಿ ಕೋರಿತ್ತು. ಮನವಿಯನ್ನು ಲೇಖಕರು ತಿರಸ್ಕರಿಸಿದ್ದರು. ಈ ಹಿನ್ನೆಲೆ ಈ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈಗ ಮಕ್ಕಳ ಕಲಿಕೆ ಹಿತದೃಷ್ಟಿಯಿಂದ ಈ ಸಾಲಿಗೆ ಪಠ್ಯ ಮುಂದುವರಿಸಿ, ಮುಂದಿನ ಸಾಲಿಗೆ ಹೊಸ ಪಾಠ ಅಳವಡಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ :ದೇಶದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಕುಮಾರಸ್ವಾಮಿ: ಹೆಚ್ ಡಿ ದೇವೇಗೌಡ