ಬೆಂಗಳೂರು :ತಾನುಇಷ್ಟಪಟ್ಟಿದ್ದ ಯುವತಿಯನ್ನು ಆಕೆಯ ಪೋಷಕರು ಬಲವಂತವಾಗಿ ಕೂಡಿ ಹಾಕಿದ್ದಾರೆ. ಆಕೆಯನ್ನು ಬಿಡುಗಡೆಗೊಳಿಸುವಂತೆ ಕೋರಿ ಸಲ್ಲಿಸಿದ್ದ ವೈದ್ಯನ ಅರ್ಜಿಯನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್ ಮತ್ತೆ ಯುವತಿಗೆ ತೊಂದರೆ ನೀಡದಂತೆ ಆತನಿಗೆ ಸೂಚಿಸಿದೆ.
ತಾನು ಪ್ರೀತಿಸುತ್ತಿರುವ ಯುವತಿಯನ್ನು ಪೋಷಕರು ಬಲವಂತವಾಗಿ ಕೂಡಿ ಹಾಕಿದ್ದಾರೆ. ನೋಡಲಿಕ್ಕೂ ಬಿಡುತ್ತಿಲ್ಲ ಎಂದು ಆರೋಪಿಸಿ ರಾಮನಗರದ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ವೈದ್ಯ ಲೋಕನಾಥ್ ಆರ್ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಯುವತಿ ತಾನು ಪೋಷಕರ ಜೊತೆಗಿದ್ದು, ವೈದ್ಯರಿಂದಲೇ ತೊಂದರೆಯಾಗುತ್ತಿರುವುದಾಗಿ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವೈದ್ಯ ಮತ್ತೆ ಯುವತಿಯ ತಂಟೆಗೆ ಹೋಗದಂತೆ ಎಚ್ಚರಿಸಿ, ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ :38 ವರ್ಷದ ಲೋಕನಾಥ್ ನೆಲಮಂಗಲದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬರುತ್ತಿದ್ದಾಗ 20 ವರ್ಷದ ಯುವತಿಯ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇತ್ತೀಚೆಗೆ ಪೋಷಕರು ಮಗಳನ್ನು ಒತ್ತಾಯಪೂರ್ವಕವಾಗಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ್ದ ವೈದ್ಯ ಆಕೆಯನ್ನು ಬಿಡುಗಡೆಗೊಳಿಸಲು ಕೋರಿ ಜೂನ್ 9ರಂದು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.
ಪ್ರಕರಣದ ವಿಚಾರಣೆ ವೇಳೆ ಯುವತಿಯ ಪೋಷಕರ ಪರ ವಾದ ಮಂಡಿಸಿದ್ದ ವಕೀಲ ವೆಂಕಟೇಶ್ ದೊಡ್ಡೇರಿ, ಯುವತಿ ಪ್ರಾಪ್ತ ವಯಸ್ಕಳಾಗಿದ್ದಾಳೆ, ಆಕೆಯನ್ನು ಬಚ್ಚಿಡುವ ಅಗತ್ಯವಿಲ್ಲ. ಇತ್ತೀಚೆಗೆ ವೈದ್ಯ, ಯುವತಿ ಮನೆ ಬಳಿಗೆ ಹೋಗಿ ಗದ್ದಲ ಮಾಡುತ್ತಿರುವ ಆರೋಪಗಳಿವೆ. ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಸೂಚಿಸಬೇಕು ಎಂದು ಕೋರಿದ್ದರು. ಮನವಿ ಪುರಸ್ಕರಿಸಿರುವ ಪೀಠ ಯುವತಿ ತಂಟೆಗೆ ಹೋಗದಂತೆ ವೈದ್ಯನಿಗೆ ಎಚ್ಚರಿಸಿದೆ.