ಬೆಂಗಳೂರು:130ಕ್ಕೂ ಅಧಿಕ ವರ್ಷ ನೂರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಆಧಾರವಾಗಿದ್ದ ಶಾಲೆ ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಐತಿಹಾಸಿಕವಾಗಿ ಶತಮಾನೋತ್ಸವ ಆಚರಿಸಿಕೊಳ್ಳಬೇಕಿದ್ದ ಶಾಲೆ ಅಭಿವೃದ್ಧಿ ಕಾಣದೆ ಮೂಲೆಗುಂಪಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅರುವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ 130ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ಗ್ರಾಮದ ಸುತ್ತಮುತ್ತ ಮತ್ತು ದೇವನಹಳ್ಳಿ ಸೇರಿದಂತೆ ಹಲವಾರು ಗ್ರಾಮದ ಜನರು ಈ ಶಾಲೆಗೆ ವಿದ್ಯಾಭ್ಯಾಸ ಮಾಡಲು ಬರ್ತಿದ್ದರು. ಈ ಸರ್ಕಾರಿ ಶಾಲೆ ಆರಂಭದಲ್ಲಿ ಅರುವನಹಳ್ಳಿ ಊರಿನ ಮಧ್ಯ ಭಾಗದಲ್ಲಿ ಆರಂಭಗೊಂಡಿತ್ತು. ಸುಮಾರು 20 ವರ್ಷಗಳ ಕಾಲ ಅಲ್ಲೇ ಶಾಲೆ ನಡೆಯಿತು.
ಶತಮಾನದ ಶಾಲೆಗಿಲ್ಲ ಅಭಿವೃದ್ಧಿ ಭಾಗ್ಯ 60 ರಿಂದ 70 ವರ್ಷಗಳಿಂದ ಶಾಲೆ ನಡೆಯುತ್ತಾ ಬಂದಿದೆ. ಇದೇ ಶಾಲೆಯಲ್ಲಿ ನಾನು ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಓದಿದ್ದೇವೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮದ ಜನರು ಕೂಡ ಇಲ್ಲೇ ಓದಿದ್ದು. ಅಷ್ಟೇ ಅಲ್ಲ ಸಾವಿರಾರು ಜನರು ಇಲ್ಲೇ ಶಿಕ್ಷಣ ಪಡೆದು ಉತ್ತಮ ಉದ್ಯೋಗದಲ್ಲಿದ್ದಾರೆ. ಸರ್ಕಾರ ಇತ್ತ ಗಮನಹರಿಸಿದರೆ ಉತ್ತಮ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಶಾಲೆಯ ಶತಮಾನೋತ್ಸವ ಆಚರಿಸಬೇಕು. ಈಗಾಗಲೇ ಲೇಟಾಗಿದೆ. ಗ್ರಾಮಸ್ಥರು ಕೂಡ ಇದಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಈ ಶಾಲೆ ಇನ್ನೂ ಅಭಿವೃದ್ಧಿ ಹೊಂದಬೇಕು. ಸರ್ಕಾರಿ ಶಾಲೆ ಅಭಿವೃದ್ಧಿ ಕಂಡರೆ ಇದ್ದುದರಲ್ಲೇ ಉತ್ತಮ ಶಿಕ್ಷಣ ನೀಡುತ್ತಿರುವ ಶಾಲೆಗೆ ಮಕ್ಕಳು ಕೂಡ ಹೆಚ್ಚಾಗಿ ಬರುತ್ತಾರೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.