ಬೆಂಗಳೂರು: ರೈತರ ಪ್ರತಿಭಟನೆ ಬೆನ್ನಲ್ಲೇ ಸರ್ಕಾರಕ್ಕೆ ಇದೀಗ ಸಾರಿಗೆ ನೌಕರರ ಪ್ರತಿಭಟನೆ ಬಿಸಿ ತಟ್ಟಲಿದೆ. ನಾಳೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸ್ತಬ್ಧವಾಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ನಾಳೆ ಸಾರಿಗೆ ನೌಕರರಿಂದ ವಿಧಾನಸೌಧವನ್ನು ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ತೆರಳಿ ವಿಧಾನಸೌಧವನ್ನು ಮುತ್ತಿಗೆ ಹಾಕಲಿದ್ದಾರೆ. ನಾಳೆ ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಸುಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರಿಗೆ ನೌಕರರಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಸಮಯಕ್ಕೆ ಸರಿಯಾಗಿ ಬಸ್ಸುಗಳು ಸಿಗದೇ ಇರಬಹುದು. ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಸಾರಿಗೆ ನೌಕರರು ಇದ್ದು, ಇವರ ಈ ಜಾಥಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.