ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರಸ್ಪರ ಸವಾಲು ಪ್ರತಿ ಸವಾಲು ಹಾಕಿದ ಘಟನೆ ನಡೆಯಿತು.
ಬಜೆಟ್ ಚರ್ಚೆ ವೇಳೆ ಮಾತನಾಡುತ್ತಾ ಸಿದ್ದರಾಮಯ್ಯ, ಆಪರೇಷನ್ ಕಮಲ ಮಾಡಿ ಆಡಳಿತಕ್ಕೆ ಬಂದು ಆಪರೇಷನ್ ಬರ್ಬಾದ್ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದರು. ಆ ವೇಳೆ ಸಿಎಂ ನೀವೇ ಕಾಂಗ್ರೆಸ್ ಶಾಸಕರನ್ನು ಕಳುಹಿಸಿಕೊಟ್ಟಿದ್ದೀರಿ ಎಂದು ಕಾಲೆಳೆದರು. ಆಗ ನಮ್ಮಿಂದ ಹೋದವರೆಲ್ಲರನ್ನೂ ವಾಪಸು ಕಳುಹಿಸಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಈ ಮಧ್ಯೆ ನೀವು ಸಿಎಂ ಆಗುವ ತಿರುಕನ ಕನಸು ಕಾಣಬೇಡಿ ಎಂದು ಸಿದ್ದರಾಮಯ್ಯಗೆ ಸಿಎಂ ಟಾಂಗ್ ನೀಡಿದರು. ಈ ಎಲ್ಲಾ ಅಂಶಗಳನ್ನು ನೀವು ಉಪಸಮರದಲ್ಲಿ ಜನರ ಮುಂದೆ ಇಡಿ. ನೀವು ಉಪಚುನಾವಣೆಗೆ ಬರುತ್ತೀರ. ನಾವು ಬರುತ್ತೇವೆ. ಉಪಸಮರದಲ್ಲಿ ಗೆಲ್ತೀವಿ ಆ ಮೇಲೆ ಮಾತನಾಡೋಣ ಎಂದು ಸವಾಲು ಹಾಕಿದರು.
ಸಿಎಂ-ಮಾಜಿ ಸಿಎಂಗಳ ಸವಾಲು-ಪ್ರತಿಸವಾಲು ಆಗ ಸಿಎಂಗೆ ಪ್ರತಿ ಸವಾಲು ಹಾಕಿದ ಸಿದ್ದರಾಮಯ್ಯ, ವಿಧಾನಸಭೆ ವಜಾಗೊಳಿಸಿ. ಯಾರಿಗೆ ಮತ ಹಾಕುತ್ತಾರೆ ನೋಡೋಣ ಎಂದು ಸವಾಲು ಹಾಕಿದರು. ನಾವು ಅದಕ್ಕೆ ಸಿದ್ಧರಿದ್ದೇವೆ. ವಿಧಾನಸಭೆ ವಜಾ ಮಾಡಿದರೆ, ಎಲ್ಲರೂ ಚುನಾವಣೆ ಎದುರಿಸಲೇಬೇಕು ಎಂದರು.
ನಾನು ನೇರವಾಗಿ ರಾಜಕಾರಣ ಮಾಡಿದ್ದೇನೆ:
ನಾನು ನೇರವಾಗಿ ರಾಜಕೀಯ ಮಾಡುತ್ತಾ ಬಂದಿದ್ದೇನೆ. ಕೊನೆವರೆಗೂ ಆ ರೀತಿಯೇ ರಾಜಕಾರಣ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯನವರೇ ಕಳಿಸಿದ್ದೀರಿ ಎಂದು ಸಿಎಂ ಹೇಳಿದ್ದಕ್ಕೆ ಸ್ಪಷ್ಟನೆ ನೀಡುವಂತೆ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಆ ದರಿದ್ರದ ವ್ಯವಸ್ಥೆ ನನಗೆ ಬಂದಿಲ್ಲ. ನಮ್ಮ ಶಾಸಕರನ್ನು ಕಳುಹಿಸುವುದಾದರೆ ಬಹಿರಂಗವಾಗಿಯೇ ಕಳುಹಿಸುತ್ತೇನೆ. ಧೈರ್ಯವಾಗಿ ಕಳುಹಿಸುತ್ತೇನೆ. ಕದ್ದು ಮುಚ್ಚಿ ಕಳುಹಿಸಲ್ಲ ಎಂದರು.
ಜೆಡಿಎಸ್ ಈಸ್ ಡಿಮಾಂಡೆಡ್ ಪಾರ್ಟಿ:
ಜೆಡಿಎಸ್ ಈಸ್ ಡಿಮಾಂಡೆಡ್ ಪಾರ್ಟಿ. ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗದ ಕಾರಣ ನೀವು ಡಿಮಾಂಡೆಡ್ ಪಕ್ಷವಾಗಿದ್ದೀರಿ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.ಹೆಚ್.ಡಿ.ರೇವಣ್ಣ ಮಾತನಾಡುತ್ತಾ ಸಿಂದಗಿಯಲ್ಲಿ, ಶಿವಮೊಗ್ಗದಲ್ಲಿ ನಮ್ಮ ಪಕ್ಷದವರನ್ನು ಅಭ್ಯರ್ಥಿ ಆಗಿ ಹುಡುಕಿದ್ದೀರಿ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ, ಅಶೋಕ್ ಮನುಗೋಳಿ ಉಲ್ಲೇಖ ಮಾಡಿದರು. ನಮ್ಮ ಪಕ್ಷಕ್ಕೆ ಡಿಮಾಂಡ್ ಇದೆ ಎಂದು ಸಿದ್ದರಾಮಯ್ಯರ ಕಾಲೆಳೆದರು.
ಇದಕ್ಕೆ ಸಿದ್ದರಾಮಯ್ಯ ಉತ್ತರಿಸುತ್ತಾ, ನಿಮ್ಮ ಪಕ್ಷಕ್ಕೆ ಡಿಮಾಂಡ್ ಇದ್ದೇ ಇದೆ. ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಜೆಡಿಎಸ್ ಗೆ ಸಾಧ್ಯವಿಲ್ಲ, ಈ ಕಾರಣದಿಂದ ಡಿಮ್ಯಾಂಡ್ ನಲ್ಲಿ ಇರಲೇ ಬೇಕು ಎಂದು ಕಾಲೆಳೆದರು.