ಬೆಂಗಳೂರು: ಕಲ್ಲಿದ್ದಲ ಕೊರತೆ ರಾಜ್ಯವನ್ನು ಕತ್ತಲ ಕೂಪದ ಅಂಚಿಗೆ ತಳ್ಳಿತ್ತು. ರಾಜ್ಯಕ್ಕೆ ಆತಂಕ ಸೃಷ್ಟಿಸಿದ್ದ ಕಲ್ಲಿದ್ದಲ ಪೂರೈಕೆ, ಕೊರತೆಯ ಸ್ಥಿತಿಗತಿ ಈಗ ಹೇಗಿದೆ? ಎಂಬ ವರದಿ ಇಲ್ಲಿದೆ.
ಶಾಖೋತ್ಪನ್ನ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯೇ ಕುಂಠಿತವಾಗಿತ್ತು. ಇದರಿಂದ ರಾಜ್ಯ ವಿದ್ಯುತ್ ಕೊರತೆಯ ಆತಂಕ ಎದುರಿಸಿತ್ತು. ಕಲ್ಲಿದ್ದಲ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸಾಕಷ್ಟು ಕಸರತ್ತು ಮಾಡಿತು. ಇತ್ತ ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಿತು. ಆದರೆ, ಇದೀಗ ಕಲ್ಲಿದ್ದಲು ಪೂರೈಕೆಯಲ್ಲಿ ಚೇತರಿಕೆ ಕಾಣುತ್ತಿದೆ. ಅದರ ಜೊತೆಗೆ ವಿದ್ಯುತ್ ಬೇಡಿಕೆಯೂ ಕಡಿಮೆಯಾಗುತ್ತಿದೆ.
ಕಲ್ಲಿದ್ದಲು ಪೂರೈಕೆಯಲ್ಲಿ ಚೇತರಿಕೆ; ವಿದ್ಯುತ್ ಬೇಡಿಕೆಯೂ ಇಳಿಕೆ: ಕಲ್ಲಿದ್ದಲು ಪೂರೈಕೆಯಲ್ಲಿ ಇದೀಗ ಚೇತರಿಕೆ ಕಾಣುತ್ತಿದೆ. ಈ ಮುಂಚೆ ರಾಜ್ಯದ ಮೂರು ಶಾಖೋತ್ಪನ್ನ ಸ್ಥಾವರಗಳಿಗೆ ನಿತ್ಯ ಸುಮಾರು 7-8 ರೇಕ್ ಬರುತ್ತಿದ್ದ ಕಲ್ಲಿದ್ದಲು ಈಗ ನಿತ್ಯವೂ 14 ರೇಕ್ ಪೂರೈಕೆಯಾಗುತ್ತಿದೆ.
ಇದರಿಂದ ಶಾಖೋತ್ಪನ್ನ ಸ್ಥಾವರಗಳಲ್ಲಿನ ವಿದ್ಯುತ್ ಉತ್ಪಾದನೆಯಲ್ಲೂ ಚೇತರಿಕೆ ಕಾಣುತ್ತಿದೆ. ಇತ್ತ ವಿದ್ಯುತ್ ಬೇಡಿಕೆಯಲ್ಲೂ ಇಳಿಕೆ ಕಾಣುತ್ತಿದೆ. ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ 8,131 ಮೆಗಾ ವ್ಯಾಟ್ ಇದೆ. ಈ ಪೈಕಿ ರಾಜ್ಯದ ವಿದ್ಯುತ್ ಉತ್ಪಾದನೆ 3,601 ಮೆಗಾ ವ್ಯಾಟ್. ಸೆಂಟ್ರಲ್ ಗ್ರಿಡ್ ( ಸಿಜಿಎಸ್) ನಿಂದ 2446 ಮೆಗಾ ವ್ಯಾಟ್ ಹಾಗೂ ನವೀಕರಿಸಬಹುದಾದ ಇಂಧನ ಮೂಲದಿಂದ 2088 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಆಗುತ್ತಿದೆ.