ಬೆಂಗಳೂರು: ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿಗದಿಪಡಿಸಿರುವ ಶುಲ್ಕ ದುಬಾರಿಯಾಗಿದೆ ಮತ್ತು ಕೊರೊನಾ ಪೀಡಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘ ಬರೆದಿರುವ ಪತ್ರವನ್ನೇ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್) ಪರಿಗಣಿಸಿದೆ.
ಎಎಬಿ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತು ವಕೀಲೆ ಅನು ಚಂಗಪ್ಪ ಬರೆದಿರುವ ಪ್ರತ್ಯೇಕ ಪತ್ರಗಳನ್ನು ಪಿಐಎಲ್ಗಳಾಗಿ ಪರಿವರ್ತಿಸಿ ವಿಚಾರಣೆಗೆ ನಿಗದಿಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶಿಸಿದ್ದಾರೆ.
ಅಲ್ಲದೆ ಅರ್ಜಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ಪ್ರತಿವಾದಿಗಳನ್ನಾಗಿ ಮಾಡಲು ಸೂಚಿಸಿದ್ದಾರೆ. ಸರ್ಕಾರದ ಪ್ರಾಧಿಕಾರಗಳು ಶಿಫಾರಸ್ಸು ಮಾಡಿದ ರೋಗಿಗಳಿಗೆ ಪ್ರತಿ ದಿನಕ್ಕೆ 8,500 ದಿಂದ 12,500 ಸಾವಿರ ರೂ. ಮತ್ತು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಗೆ 15,000 ದಿಂದ 25000 ರೂ. ನಿಗದಿಪಡಿಸಲಾಗಿದೆ.
ಈ ಶುಲ್ಕವನ್ನು ಭರಿಸಲು ಕಡು ಬಡವರು ಮತ್ತು ಮಧ್ಯಮ ವರ್ಗದವರಿಗೆ ತುಂಬಾ ಕಷ್ಟವಾಗಲಿದೆ ಎಂದು ಎ.ಪಿ. ರಂಗನಾಥ್ ಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಯಾವ ಮಾನದಂಡ ಅನುಸರಿಸಿ ಈ ಶುಲ್ಕ ನಿಗದಿಪಡಿಸಿದೆ ಎಂಬುದನ್ನೇ ತಿಳಿಸಿಲ್ಲ. ಕೊರೊನಾ ರೋಗಿಗಳನ್ನು ದಾಖಲಿಸಲು ಕೂಡ ಸೂಕ್ತ ಮಾನದಂಡವಿಲ್ಲ. ಶೇ.50ರಷ್ಟು ಹಾಸಿಗೆ ಮೀಸಲಿರಿಸುವ ಬಗ್ಗೆಯೂ ಗೊಂದಲವಿದ್ದು, ಸರ್ಕಾರದ ಈ ಶುಲ್ಕ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲವಾಗುವಂತಿದೆ ಎಂದಿದ್ದಾರೆ.
ಕೊರೊನಾ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಹಾಗೆಯೇ ವಕೀಲರಿಗೆ ಆರೋಗ್ಯ ವಿಮೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.