ಬೆಂಗಳೂರು: ತಮಿಳುನಾಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಅಕ್ರಮ ಆಸ್ತಿ ಮತ್ತು ಬೆಲೆ ಬಾಳುವ ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ನಗರದ ವಿಶೇಷ ನ್ಯಾಯಾಲಯ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ(ಪ್ರಥಮ ಮೇಲ್ಮನವಿ ಪ್ರಾಧಿಕಾರ) ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಈ ಅಂಶ ಉಲ್ಲೇಖವಾಗಿದೆ.
ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಗರದ ವಿಶೇಷ ನ್ಯಾಯಾಲಯವು ಜಯಲಲಿತಾಗೆ ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರು. ದಂಡ ವಿಧಿಸಿ 2014ರ ಸೆ.27ರಂದು ಆದೇಶಿಸಿತ್ತು. ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್ಬಿಐ, ಎಸ್ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು.
ಈ ಸಂಬಂಧ ನರಸಿಂಹಮೂರ್ತಿ, 2022ರ ಆ.12ರಂದು ನಗರದ ಸಿಟಿ ಸಿವಿಲ್ ಕೋರ್ಟ್ ಮಾಹಿತಿ ಹಕ್ಕು ಅಧಿಕಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಜಪ್ತಿ ಮಾಡಿರುವ ಜಯಲಲಿತಾ ಅವರಿಗೆ ಸೇರಿದ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಆದರೆ, ಮಾಹಿತಿ ನೀಡಲು ನಿರಾಕರಿಸಿದ ಮಾಹಿತಿ ಹಕ್ಕು ಅಧಿಕಾರಿ, 2022ರ ಸೆ.7ರಂದು ಆ ಅರ್ಜಿ ತಿರಸ್ಕರಿಸಿದ್ದರು. ಇದರಿಂದ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಮೇಲ್ಮನವಿಯ ವಿಚಾರಣೆ ನಡೆಸಿದ ಮೇಲ್ಮನವಿ ಪ್ರಾಧಿಕಾರ ಈ ಆದೇಶ ನೀಡಿದೆ.