ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಸಾಲದು, ದೇಶ ರಾಮರಾಜ್ಯವಾಗಬೇಕು ಎಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯರು ಹಾಗೂ ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮ ದೇಶಕ್ಕೆ ನೀಡಿದ ಸಂದೇಶ ಮಹತ್ತರವಾದುದು. ಅಕ್ಕ ಪಕ್ಕದವರನ್ನೂ ವಿಶ್ವಾಸದಿಂದ ಕಾಣುವುದು ನಮ್ಮ ಧರ್ಮವಾಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯದಲ್ಲಿ ಸ್ವಾಮಿಗೆ ಪ್ರಾಣ ಪ್ರತಿಷ್ಠೆ ಆಗಲಿದೆ. ಆ ಸಂದರ್ಭ ನಾವೆಲ್ಲಾ ಅಲ್ಲಿರುತ್ತೇವೆ. ದೇಶವನ್ನು ರಾಮರಾಜ್ಯವಾಗಿಸಬೇಕು ಎಂದರು.
ತಾಯಿ ಹಾಗೂ ಭೂಮಿಯನ್ನು ಹೇಗೆ ಪ್ರೀತಿಸಬೇಕೆಂದು ರಾಮ ಹೇಳಿದ್ದಾರೆ. ಇದೇ ರಾಮ ಭಕ್ತಿ, ಇದು ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ. ಕಷ್ಟದಲ್ಲಿರುವವರಿಗೆ ಸಹಕಾರ ನೀಡುವ ಮನೋಭಾವ ಇರಬೇಕು. ಹಣ, ಮನೆ ಪ್ರಮುಖ ಭಾಗವಲ್ಲ. ನಮ್ಮ ವೃತ್ತಿಯಲ್ಲಿ ಶಕ್ತಿಯಾನುಸಾರ ಸೇವೆ ಮಾಡಿದರೆ ಅದೇ ರಾಮನ ಸೇವೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ಮಾಡೋಣ. ಅದನ್ನು ರಾಮನಿಗೆ ಸಮರ್ಪಿಸೋಣ. ಇದೇ ನಿಜವಾದ ರಾಮಸೇವೆ. ಆಗ ರಾಮರಾಜ್ಯವಾಗಲಿದೆ. ಇದಕ್ಕೆ ಸಮಾಜದ ಎಲ್ಲಾ ವರ್ಗದವರೂ ಸ್ಪಂದಿಸಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು.
ರಾಮರಾಜ್ಯ ಹೆಸರಿನಲ್ಲಿ ಆಪ್ ಸಿದ್ಧಪಡಿಸುವ ಉದ್ದೇಶ ಹೊಂದಿದ್ದೇವೆ:ಮಕರ ಸಂಕ್ರಾಂತಿ ಹೊತ್ತಿಗೆ ದೇವಾಲಯ ನಿರ್ಮಾಣ ಆಗಿದೆ. ಮುಂದಿನ ಮಕರ ಸಂಕ್ರಾಂತಿ ಹೊತ್ತಿಗೆ ದೇವಾಲಯ ಉದ್ಘಾಟನೆಯಾಗಲಿದೆ. ಪ್ರಾಣ ಪ್ರತಿಷ್ಠೆ ಈಗ ಆಗಲಿದೆ. ರಾಮರಾಜ್ಯ ಹೆಸರಿನಲ್ಲಿ ಆಪ್ ಸಿದ್ಧಪಡಿಸುವ ಉದ್ದೇಶ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸಂಕಲ್ಪ ಅಭಿಯಾನಕ್ಕೆ ಪ್ರಧಾನಿ ಮುಂದಾಗಬೇಕೆಂಬ ಪತ್ರ ಬರೆಯುತ್ತೇವೆ. ರಾಮ ನವಮಿ ಒಳಗೆ ಈ ಪತ್ರ ಬರೆಯಲಿದ್ದೇವೆ. ಉಳ್ಳವರು ಸಹಾಯ ಸಹಕಾರಕ್ಕೆ ಮುಂದಾಗಬೇಕು. ವೃದ್ಧರನ್ನು ಗೌರವಿಸೋಣ. ಆ ಸಂಕಲ್ಪ ನಮ್ಮದಾಗಲಿ ಎಂದು ಶ್ರೀಗಳು ತಿಳಿಸಿದರು.
ಇದನ್ನೂ ಓದಿ:ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್: ಸಿಎಂ ಬೊಮ್ಮಾಯಿ ತಿರುಗೇಟು