ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ.. ಟಿಕೆಟ್​ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್​ನಿಂದ ಕ್ಷಣಗಣನೆ ಆರಂಭ- ಈ ಕುರಿತು ಟ್ವೀಟ್​ ಮಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ- ಟಿಕೆಟ್​ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್​ನಿಂದ ಕ್ಷಣಗಣನೆ ಆರಂಭ.
ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್​ನಿಂದ ಕ್ಷಣಗಣನೆ ಆರಂಭ.

By

Published : Apr 4, 2023, 5:14 PM IST

ಬೆಂಗಳೂರು:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ತಡವಾಗಿ ಬಿಡುಗಡೆ ಮಾಡಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್​ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಎರಡನೇ ಪಟ್ಟಿ ಬಿಡುಗಡೆ ಮಾಡುವುದು ಮೊದಲ ಪಟ್ಟಿಯಷ್ಟು ನಿರಾಳವಾಗಿ ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಪಟ್ಟಿ ಬಿಡುಗಡೆ ಕಗ್ಗಂಟಾಗಿ ಪರಿಣಮಿಸಿದೆ. ಆದರೆ, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಟ್ವೀಟ್​ ಮಾಡಿ, ಇಂದೇ 2ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಏ.5ಕ್ಕೆ ರಾಹುಲ್​ ಗಾಂಧಿ ಸಮ್ಮುಖದಲ್ಲಿ ಪಟ್ಟಿ ಬಿಡುಗಡೆ ಮಾಡಬೇಕೆಂಬ ರಾಜ್ಯ ಕೈ ನಾಯಕರ ಕನಸು ಈಡೇರುವುದು ಅಸಾಧ್ಯವಾಗಿದೆ.

ಇಂದು ದೆಹಲಿಯಲ್ಲಿ ಎಐಸಿಸಿ ವರಿಷ್ಠರು ಮತ್ತು ಸ್ಕ್ರೀನಿಂಗ್‌ ಸಮಿತಿ ಸದಸ್ಯರು ಮತ್ತೊಂದು ಸುತ್ತಿನ ಸಭೆ ನಡೆಯಿತು

ಯುಗಾದಿ ನಂತರ ಬಿಡುಗಡೆಯಾಗಿದ್ದ ಮೊದಲ ಪಟ್ಟಿ: ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ ಕಾಂಗ್ರೆಸ್ ಮೊದಲ ಪಟ್ಟಿ ಕೊಂಚ ವಿಳಂಬವಾಗಿ ಅಂದರೆ, ಯುಗಾದಿ ನಂತರ ಮಾ.25ರಂದು ಬಿಡುಗಡೆಯಾಗಿತ್ತು. ಅಲ್ಲಿಯೇ ಎದುರಾಗಿರುವ ಸಣ್ಣಪುಟ್ಟ ಕಲಹ, ಅಸಮಾಧಾನ, ಆಕ್ರೋಶ, ಪ್ರತಿಭಟನೆಯನ್ನು ಎದುರಿಸುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ಹೀಗಿರುವಾಗ ಐದಕ್ಕೂ ಹೆಚ್ಚು ಆಕಾಂಕ್ಷಿಗಳಿರುವ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಇತರೆ ನಾಯಕರ ಜತೆ ಗುರುತಿಸಿಕೊಂಡಿರುವ ಪ್ರಬಲ ಆಕಾಂಕ್ಷಿಗಳ ನಡುವೆ ದೊಡ್ಡ ಮಟ್ಟದ ಪೈಪೋಟಿ ಇರುವ ಕ್ಷೇತ್ರಗಳು ಸಾಕಷ್ಟಿವೆ. ಮೊದಲ ಪಟ್ಟಿಯಲ್ಲಿ 224ರ ಪೈಕಿ ಗೆಲ್ಲಬಲ್ಲ ಹಾಗೂ ಹಾಲಿ ಶಾಸಕರಿರುವ 124 ಕ್ಷೇತ್ರಗಳ ಪಟ್ಟಿ ಪ್ರಕಟವಾಗಿದೆ. ಇಲ್ಲಿಯೇ ಇದೀಗ ಸಾಕಷ್ಟು ಸವಾಲು ಎದುರಾಗಿದ್ದು, ಎರಡನೇ ಪಟ್ಟಿ ರಾಜ್ಯದಲ್ಲಿ. ಇದರಿಂದಲೇ ಅಳೆದು ತೂಗಿ ಪಟ್ಟಿ ಬಿಡುಗಡೆಗೆ ದಿನ ದೂಡುತ್ತಿದ್ದ ಕಾಂಗ್ರೆಸ್ ನಾಯಕರು ಇಂದು ತಡವಾಗಿ ಪಟ್ಟಿ ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆ:ಏ. 9 ರಂದು ರಾಜ್ಯಕ್ಕೆ ರಾಹುಲ್​ ಗಾಂಧಿ ಭೇಟಿ ನೀಡುತ್ತಿದ್ದಾರೆ. ಇದಕ್ಕೂಮುನ್ನ ದಿಲ್ಲಿಯಲ್ಲಿ ಇಂದು ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆ ಸಹ ನಡೆಸುತ್ತಿದ್ದಾರೆ. ಇಲ್ಲಿ ಪಟ್ಟಿ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಆದರೆ ಆಕಾಂಕ್ಷಿಗಳ ಒತ್ತಡ ಹೆಚ್ಚಿದ್ದು, ಇದರಿಂದ ಇಂದು 2ನೇ ಪಟ್ಟಿಯನ್ನು ಬಿಡುಗಡೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಕೈ ನಾಯಕರು ಪಟ್ಟಿ ಅಂತಿಮಗೊಳಿಸುವ ಯತ್ನದಲ್ಲಿ ನಿರತರಾಗಿದ್ದಾರೆ.

124 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅಂತಿಮ:124 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಸ್ಕ್ರೀನಿಂಗ್ ಕಮಿಟಿ ಉಳಿದ ನೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ. ಇದರಲ್ಲಿ 40 ಕ್ಷೇತ್ರಗಳಿಗೆ ಎರಡರಿಂದ ಮೂರು ಅಭ್ಯರ್ಥಿಗಳನ್ನು ಎಐಸಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದ್ದು, ಇಲ್ಲಿ ಒಮ್ಮತಕ್ಕೆ ಬರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೊದಲ ಪಟ್ಟಿಯಲ್ಲಿಯೇ 9 ಹಾಲಿ ಶಾಸಕರ ಕ್ಷೇತ್ರದ ಟಿಕೆಟ್ ಘೋಷಣೆ ಆಗಿಲ್ಲ. ಅವರಿಂದಲೂ ಒತ್ತಡ ಬರುತ್ತಿದೆ. ಇನ್ನು ಇತ್ತೀಚೆಗೆ ಪಕ್ಷ ಸೇರಿದವರು ಸಹ ಟಿಕೆಟ್ ಕೇಳುತ್ತಿದ್ದಾರೆ. ಇಲ್ಲಿಂದ ಮೊದಲೇ ಅರ್ಜಿ ಸಲ್ಲಿಸಿರುವ ಕೈ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಂತಿಮ ತೀರ್ಮಾನಕ್ಕೆ ಬರಲು ಎಲ್ಲಾ ರೀತಿಯ ಕಸರತ್ತುಗಳನ್ನು ನಡೆಸಿದ್ದಾರೆ.

ಎರಡನೇ ಪಟ್ಟಿಗೆ 35 ಕ್ಷೇತ್ರಗಳ ಆಯ್ಕೆ ಕಾಂಗ್ರೆಸ್ ಪಾಲಿಗೆ ಕಷ್ಟಕರವಾಗಿಲ್ಲ. ಒಬ್ಬರ ಹೆಸರು ಅಂತಿಮ ಮಾಡಲಾಗಿದೆ. ಆದರೆ ಪುತ್ತೂರು, ಮಂಗಳೂರು ಉತ್ತರ, ಕಲಘಟಗಿ, ತೀರ್ಥಹಳ್ಳಿ, ದಾಸರಹಳ್ಳಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸೇರಿದಂತೆ 40 ಕ್ಷೇತ್ರಗಳಲ್ಲಿ ಹೆಸರು ಅಂತಿಮಗೊಳಿಸುವುದು ಕಾಂಗ್ರೆಸ್​ಗೆ ದೊಡ್ಡ ಸವಾಲಾಗಿತ್ತು. ಇನ್ನೊಂದೆಡೆ ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಟಿಕೆಟ್ ಬಯಸಿರುವುದು ಇನ್ನಷ್ಟು ಕಗ್ಗಂಟಾಗಿತ್ತು. ಅನಾಮಧೇಯ ಕಾಂಗ್ರೆಸ್ ಮುಖಂಡರು ಕೇಂದ್ರ ನಾಯಕರಿಗೆ ಈ ವಿಚಾರವಾಗಿ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಡಾ. ಜಿ.ಪರಮೇಶ್ವರ್ ಸೇರಿದಂತೆ ಕೈ ಪಾಳೆಯದ ಮೂವರು ನಾಯಕರು ತಮಗೆ ಎರಡು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೋರಿದ್ದಾರೆ ಎಂದು ಹೇಳಲಾಗುತ್ತಿತ್ತು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್​ ಮುಂದಾಗಿದೆ. ಅಂತಿಮವಾಗಿ ಕಾಂಗ್ರೆಸ್ ನಾಯಕರು ಇಂದು ಪಟ್ಟಿ ಹೊರ ತರುವ ಪ್ರಯತ್ನದಲ್ಲಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಸಭೆ ಇದಕ್ಕೊಂದು ಅಂತಿಮ ರೂಪ ನೀಡಲಿದೆ.

ಇಂದು ಪಟ್ಟಿ ಅಂತಿಮ:ಮೊದಲ ಪಟ್ಟಿ ಬಿಡುಗಡೆ ನಂತರ ಬಾಕಿ ಇರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಗಿರುವ ಬೆಳವಣಿಗೆಗಳ ಕುರಿತು ಸ್ಕ್ರೀನಿಂಗ್‌ ಸಮಿತಿ ಸದಸ್ಯರು ಈಗಾಗಲೇ ಪರಾಮರ್ಶೆ ನಡೆಸಿದ್ದಾರೆ. ಆ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇಂದು ದೆಹಲಿಯಲ್ಲಿ ಎಐಸಿಸಿ ವರಿಷ್ಠರು ಮತ್ತು ಸ್ಕ್ರೀನಿಂಗ್‌ ಸಮಿತಿ ಸದಸ್ಯರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಆ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಕಗ್ಗಂಟಾದ ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಬಂಡಾಯದ ಬಿಪಿ ಶುಗರ್ ಕಂಟ್ರೋಲ್ ಮಾಡಿ ಪಟ್ಟಿ ಸಿದ್ಧವೆಂದ ಸಿ ಟಿ ರವಿ

ABOUT THE AUTHOR

...view details