ಕರ್ನಾಟಕ

karnataka

ETV Bharat / state

ಕೊರೊನಾ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ: ಸಿದ್ದರಾಮಯ್ಯ - Corona package is like pickleless lunch

ಪ್ಯಾಕೇಜ್ ಘೋಷಿಸುವ ಮುನ್ನ ನೆರೆ ರಾಜ್ಯಗಳನ್ನು ನೋಡಿಯಾದರೂ ಯಡಿಯೂರಪ್ಪ ಅವರು ಪಾಠ ಕಲಿಯಬೇಕಿತ್ತು. ತುಟಿಗೆ ಸವರುವ ಪ್ಯಾಕೇಜ್ ಘೋಷಿಸುವ ಮೂಲಕ ಇತರ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : May 19, 2021, 4:34 PM IST

ಬೆಂಗಳೂರು:ಕೊರೊನಾ ಲಾಕ್​ಡೌನ್​ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ. ಅಲ್ಲದೇ ಇದು ಅವೈಜ್ಞಾನಿಕ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ಯಾಕೇಜ್ ಘೋಷಿಸುವ ಮುನ್ನ ನೆರೆ ರಾಜ್ಯಗಳನ್ನು ನೋಡಿಯಾದರೂ ಯಡಿಯೂರಪ್ಪ ಅವರು ಪಾಠ ಕಲಿಯಬೇಕಿತ್ತು. ತುಟಿಗೆ ಸವರುವ ಪ್ಯಾಕೇಜ್ ಘೋಷಿಸುವ ಮೂಲಕ ಇತರ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದರು.

ಬಡ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿ ಮತ್ತು ದುಡಿಯುವ ವರ್ಗದವರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡುವ ಪ್ಯಾಕೇಜ್ ಘೋಷಣೆ ಮಾಡಿ ನೂರಕ್ಕೆ ನೂರರಷ್ಟು ಲಾಕ್‍ಡೌನ್ ಜಾರಿಗೆ ತನ್ನಿ ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿಗಳು 1,250 ಕೋಟಿ ರೂ. ಪ್ಯಾಕೇಜ್ ಎಂದು ಹೇಳಿದ್ದಾರೆ. ಆದರೆ, ಅವರೇ ಬಿಡುಗಡೆ ಮಾಡಿರುವ ಅಂಕಿ-ಅಂಶ ಗಮನಿಸಿದರೆ ಪ್ಯಾಕೇಜ್​ ಮೊತ್ತ 1,111.82 ಕೋಟಿ ಇದೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗಾಗಿ 494 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಸರ್ಕಾರ ತನ್ನ ಕೈಯಿಂದ ನೀಡುವುದಲ್ಲ. ಕಾರ್ಮಿಕರ ಕಲ್ಯಾಣ ನಿಧಿಯಿಂದ ನೀಡುವಂಥದ್ದು. ಅದು ಕಾರ್ಮಿಕರು ತಮ್ಮ ಕೂಲಿ ಹಣದಲ್ಲಿ ನೀಡಿರುವ ವಂತಿಗೆ. ಹೀಗಾಗಿ ಕಾರ್ಮಿಕರಿಗೆ ನೀಡಿರುವ ಪರಿಹಾರವನ್ನು ಪ್ಯಾಕೇಜ್‍ನಲ್ಲಿ ಸೇರಿಸಬಾರದು. ಅದೇ ರೀತಿ ಸಹಕಾರ ಇಲಾಖೆಯಿಂದ ಪಿಎಲ್‍ಡಿ ಬ್ಯಾಂಕ್ ಇನ್ನಿತರೆ ಸಹಕಾರ ಬ್ಯಾಂಕ್‍ಗಳು ನೀಡಿರುವ 134.38 ಸಾಲ ವಸೂಲಾತಿ ಗಡುವನ್ನು ಮೂರು ತಿಂಗಳು ಮುಂದೂಡಲಾಗಿದೆ. ಇದನ್ನು ಸರ್ಕಾರ ಪರಿಹಾರ ಎಂಬಂತೆ ಬಿಂಬಿಸಬಾರದು. ಕಟ್ಟಡ ಕಾರ್ಮಿಕರ ಪರಿಹಾರ ಮತ್ತು ಸಾಲ ವಸೂಲಾತಿ ಮುಂದಕ್ಕೆ ಹಾಕಿರುವುದನ್ನು ಕೈ ಬಿಟ್ಟರೆ ಉಳಿಯವುದು 483.44 ಕೋಟಿ ರೂ. ಮಾತ್ರ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಜನರಿಗೆ ಯಾವ ರೀತಿಯಲ್ಲೂ ಉಪಯೋಗ ಆಗದ ಪ್ಯಾಕೇಜ್ ಆಗಿದೆ ಎಂದರು.

ಕಟ್ಟಡ ಕಾರ್ಮಿಕರ ನಿಧಿಯಿಂದಲೇ ಹಣ ಖರ್ಚು

ಕಳೆದ ವರ್ಷ ಯಡಿಯೂರಪ್ಪ ಅವರು 2,100 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದರು. ಅದರಲ್ಲಿ 850 ಕೋಟಿ ರೂ. ಕಟ್ಟಡ ಕಾರ್ಮಿಕರ ನಿಧಿಯಿಂದಲೇ ಖರ್ಚು ಮಾಡಿ, ಸರ್ಕಾರ ಖರ್ಚು ಮಾಡಿದೆ ಎಂದು ಸುಳ್ಳು ಹೇಳಲಾಯಿತು. ಕಳೆದ ಬಾರಿಯ 2,100 ಕೋಟಿ ರೂ.ಗಳ ಪ್ಯಾಕೇಜ್‍ನಲ್ಲಿ ಬಹುಪಾಲು ಹಣವನ್ನು ಬಾಧಿತರಿಗೆ ನೀಡಲೇ ಇಲ್ಲ. ಆಟೋ, ಕ್ಯಾಬ್ ಚಾಲಕರುಗಳಿಗೆ ಸಂಬಂಧಿಸಿದಂತೆ 7.75 ಲಕ್ಷ ಜನರಿಗೆ ತಲಾ ಐದು ಸಾವಿರ ರೂ. ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ವಾಸ್ತವವಾಗಿ ನೀಡಿದ್ದು ಕೇವಲ 2.10 ಲಕ್ಷ ಜನರಿಗೆ ಮಾತ್ರ.

ಹಾಗೆಯೇ ಸವಿತಾ ಸಮಾಜದ ಶೇ. 50ರಷ್ಟು ಜನರಿಗೂ ಪರಿಹಾರ ಸಿಗಲಿಲ್ಲ. ರೈತರಿಗೆ, ಹೂ ಬೆಳೆಗಾರರಿಗೆ, ಹಣ್ಣು ಬೆಳಗಾರರಿಗೆ ಘೋಷಿಸಿದ್ದ ಪರಿಹಾರದ ಹಣ ಶೇ. 50ರಷ್ಟು ಜನರಿಗೆ ಸಿಗಲಿಲ್ಲ. ಇದು ಅತ್ಯಂತ ಅವೈಜ್ಞಾನಿಕ ಪ್ಯಾಕೇಜ್. ತಮಿಳುನಾಡಿನಲ್ಲಿ 2,07,67,000 ಕುಟುಂಬಗಳಿಗೆ ತಲಾ ನಾಲ್ಕು ಸಾವಿರ ರೂ.ಗಳ ಪ್ರಕಾರ ಸುಮಾರು 8,368 ಕೋಟಿ ರೂ. ಪರಿಹಾರದ ಪ್ಯಾಕೇಜ್‍ ನೀಡಲಾಗಿದೆ. ಬಿಜೆಪಿ ಸರ್ಕಾರ ಯಾವ ಕ್ಷಣದಲ್ಲೂ ಜನಪರವಾಗಿ ಯೋಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಕಪಕ್ಕದ ರಾಜ್ಯಗಳ ಎದುರು ತೀರಾ ಸಣ್ಣ ಪ್ಯಾಕೇಜ್

ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಜೆಟ್ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ಅವರು ನೀಡಿದ್ದ ಉತ್ತರವನ್ನು ಗಮನಿಸಬೇಕು. ಅದರಲ್ಲಿ ಅವರು ಕರ್ನಾಟಕ ರಾಜ್ಯವು ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ಉತ್ತಮ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ. ಆ ರಾಜ್ಯಗಳಿಗಿಂತ ಕರ್ನಾಟಕದ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ ಇಂದು ಘೋಷಿಸಿದ ಪ್ಯಾಕೇಜ್ ನೋಡಿದರೆ ಅಕ್ಕಪಕ್ಕದ ರಾಜ್ಯಗಳ ಎದುರು ತೀರಾ ಸಣ್ಣ ಪ್ಯಾಕೇಜ್ ಆಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದಿದ್ದರೂ ಆಂಧ್ರ ಪ್ರದೇಶ, ದೆಹಲಿ, ಕೇರಳ ಮುಂತಾದ ರಾಜ್ಯಗಳು ಜನಪರವಾದ ಪ್ಯಾಕೇಜುಗಳನ್ನು ಘೋಷಿಸಿವೆ. ಆ ರಾಜ್ಯಗಳ ಮುಂದೆ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಏನೇನೂ ಅಲ್ಲ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಛಾಯಾಗ್ರಾಹಕರು, ಟೈಲರಿಂಗ್ ವೃತ್ತಿಯವರು, ಸವಿತಾ ಸಮಾಜದವರಿಗೂ ಪರಿಹಾರ ನೀಡಬೇಕು. ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಆಗಲಿ. ಅದಕ್ಕೂ ಮೊದಲು ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು. ಕೊರೊನಾ ಹಿನ್ನೆಲೆ ಮುಖ್ಯಮಂತ್ರಿಗಳಿಗೆ ಈವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಯಾವುದಕ್ಕೂ ಉತ್ತರ ನೀಡುವ ಸೌಜನ್ಯ ಸಿಎಂ ಅವರಿಗೆ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಜಾಯಮಾನ ಈ ಸರ್ಕಾರಕ್ಕೆ ಇಲ್ಲ ಎಂದರು.

ABOUT THE AUTHOR

...view details