ಬೆಂಗಳೂರು:ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣವನ್ನು ಯಾರೋ ಖದೀಮರು ಕಳ್ಳತನ ಮಾಡಿದ್ದಾರೆ ಎಂದು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಮೂಲಕ ಸತ್ಯಾಂಶವನ್ನು ಬಯಲಿಗೆ ಎಳೆದಿದ್ದಾರೆ.
ಬಿಬಿಎಂಪಿ ಅನುಮತಿ ಪಡೆದು ಕನ್ನಿಂಗ್ ಹ್ಯಾಮ್ ರಸ್ತೆಯ ಕಾಫಿ ಡೇ ಮುಂಭಾಗ 10 ಲಕ್ಷ ರೂ. ವೆಚ್ಚದಲ್ಲಿ ಆಗಷ್ಟ್ 21ರಂದು ಸೈನ್ ಪೋಸ್ಟ್ ಕಂಪನಿಯಿಂದ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಆಗಷ್ಟ್ 27ರಂದು ಸೈನ್ ಪೋಸ್ಟ್ ಕಂಪನಿಯ ಸಿಬ್ಬಂದಿ ಎಲ್ಲ ಬಸ್ ನಿಲ್ದಾಣಗಳನ್ನು ಪರೀಕ್ಷಣೆಗೆ ಬಂದಿದ್ದರು. ಆ ತಂಡ ಇಲ್ಲಿಗೂ ಭೇಟಿ ನೀಡಿತ್ತು. ಈ ವೇಳೆ ಇಲ್ಲಿ ಬಂದು ನೋಡಿದಾಗ ಬಸ್ ನಿಲ್ದಾಣವೇ ನಾಪತ್ತೆಯಾಗಿತ್ತು. ಕೂಡಲೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ತಾವು ಬಸ್ ನಿಲ್ದಾಣ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದರು. ಇದರಿಂದ ಯಾರೋ ಖದೀಮರು ತಂಗುದಾಣವನ್ನು ಕಳ್ಳತನ ಮಾಡಿದ್ದಾರೆಂದು ತಿಳಿದು ಎನ್.ರವಿ ರೆಡ್ಡಿ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಹೈಗ್ರೌಂಡ್ಸ್ ಪೊಲೀಸರು, ಹಿಂದಿನ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿತ್ತು. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದ ರವಿರೆಡ್ಡಿ ಅವರು ಆಗಸ್ಟ್ 21ರಂದು ಬಸ್ ಸ್ಟ್ಯಾಂಡ್ ಕೆಲಸವನ್ನು ಶುರು ಮಾಡಿಸಿದ್ದರು. ಆದರೆ, ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಮಾಹಿತಿ ಹಿನ್ನೆಲೆ ಶಿವಾಜಿನಗರದದ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರಿಗೆ (ಎಇಇ) ಸ್ಥಳ ಪರಿಶೀಲಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು.