ಬೆಂಗಳೂರು:ಉಚಿತ ವಿದ್ಯುತ್ ಹಾಗೂ ಸಾಲ ಮನ್ನಾದಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ. ಇವು ತಾತ್ಕಾಲಿಕ ಪರಿಹಾರ ಅಷ್ಟೇ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾರೋಪ ಸಮಾರಂಭದಲ್ಲಿ ಉಪರಾಷ್ಟ್ರಪತಿ ಭಾಷಣ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಬೇಕಿಲ್ಲ. ರೈತರಿಗೆ ಬದುಕಿಗೆ ಭದ್ರತೆ ನೀಡಿ, ಶಾಶ್ವತ ಪರಿಹಾರ ಕಲ್ಪಿಸಿ. ಇದರಿಂದ ರೈತ ಸ್ವಾವಲಂಬಿಯಾಗಿ ಬದುಕಲು ಅವಕಾಶ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ವಿಜ್ಞಾನದ ಹಾಗೂ ತಂತ್ರಜ್ಞಾನದ ಅಳವಡಿಕಡೆ ಆಗಬೇಕು. ಆಗ ರೈತರ ಆದಾಯ ಮುಂದಿನ ದಿನಗಳಲ್ಲಿ ದ್ವಿಗುಣಗೊಳ್ಳಲಿದೆ. ಅದು ಸರ್ಕಾರಗಳ ಆದ್ಯತೆ ಆಗಲಿ. ಆಗ ಯಾವುದೇ ರೈತನ ಕಾಳಜಿಯನ್ನು ಸರ್ಕಾರ ಮಾಡಬೇಕಾಗುವುದಿಲ್ಲ. ಅವರ ಬದುಕನ್ನು ಅವರೇ ಕಟ್ಟಿಕೊಳ್ಳಲಿದ್ದಾರೆ ಎಂದು ಹೇಳಿದ್ರು.
ಕೃಷಿ ದೇಶದ ಮೂಲ ಸಂಸ್ಕೃತಿ:ದೇಶದ ವಿವಿಧ ಭಾಗದಿಂದ ವಿಜ್ಞಾನಿಗಳು, ಯುವ ವಿಜ್ಞಾನಿಗಳು, ಆಸಕ್ತರು ಕಳೆದ ಐದು ದಿನ ಉತ್ತಮ ಜ್ಞಾನವನ್ನು ವಿಜ್ಞಾನದ ಮೂಲಕ ನೀಡಿದ್ದಾರೆ. ಕೃಷಿ ದೇಶದ ಮೂಲ ಸಂಸ್ಕೃತಿಯಾಗಿದೆ. ಇದನ್ನು ಬಳಿಸಿಕೊಂಡು ಸಾಗಬೇಕಿದೆ. ಇದರಿಂದ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಯನ್ನು ಕೃಷಿ ವಿಚಾರದಲ್ಲಿ ಮಾಡಿ. ಗ್ರಾಮೀಣ ಭಾಗದ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಪರಿಹಾರ ಕಲ್ಪಿಸಿ ಅವರ ಬದುಕು ಹಸನಾಗಿಸಬೇಕು. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರಿಗೆ ಉತ್ತಮ ತಂತ್ರಜ್ಞಾನ ಪರಿಚಯಿಸಿ. ಆಹಾರ ಭದ್ರತೆ ಆಮದನ್ನು ಅನುಸರಿಸಬೇಡಿ. ಇಲ್ಲೇ ಉತ್ಪಾದಿಸುವುದಕ್ಕೆ ಪ್ರೋತ್ಸಾಹಿಸಿ. ಆಗ ರೈತರ ಭವಿಷ್ಯ ಬೆಳಗುವ ಜತೆಗೆ, ದೇಶದ ಪ್ರಗತಿಯೂ ಆಗಲಿದೆ.
ಇಂತಹ ಮೇಳಗಳು ಕೃಷಿ ಪ್ರಗತಿಗೆ ಒತ್ತುಕೊಟ್ಟರೆ, ದೇಶ ಕೃಷಿ ಸಮಸ್ಯೆಯಿಂದ ದೂರ ಬರಲಿದೆ. ಹೊಸ ಕೃಷಿ ವಿಧಾನ ಅಳವಡಿಸುವ ಮೂಲಕ ಪ್ರಗತಿಯತ್ತ ಕೊಂಡೊಯ್ಯಿರಿ. ಮಣ್ಣು ಗುಣಮಟ್ಟ, ನೀರು ಸಂಸ್ಕರಣೆ, ಉತ್ತಮ ಉತ್ತೇಜನ ನೀಡಿ. ವಾತಾವರಣ ದೊಡ್ಡ ಸವಾಲಾಗಿದೆ. ಇದನ್ನು ಎದುರಿಸುವುದು ಕಷ್ಟ. ನಂತರ ಮಾರುಕಟ್ಟೆ, ಇ- ಮಾರುಕಟ್ಟೆ ಸ್ಪರ್ಧೆ ಎದುರಿಸಲು ರೈತರಿಗೆ ಅನುಕೂಲ ಕಲ್ಪಿಸಿ. ತರಕಾರಿ ಬೆಳೆ ಸಂಗ್ರಹಕ್ಕೆ, ರಫ್ತಿಗೆ ಉತ್ತಮ ಅವಕಾಶ ಕೊಡಿ ಎಂದು ಸಲಹೆ ನೀಡಿದರು.
ಉತ್ತಮ ಮಾರುಕಟ್ಟೆ ಕಲ್ಪಿಸಿ ರೈತರ ಬದುಕು ಹಸನಾಗಿಸಿ. ಹೊಸ ಆವಿಷ್ಕಾರ ಹಾಗೂ ತಂತ್ರಜ್ಞಾನ ಅಳವಡಿಕೆಯನ್ನು ಸರ್ಕಾರ ಹಾಗೂ ವಿಜ್ಞಾನಿಗಳು ಸೇರಿ ಮಾಡಬೇಕು. ಈ ದೇಶದಲ್ಲಿ ಪ್ರಶ್ನೆ ಮಾಡುವವರು ಹೆಚ್ಚು. ಆದರೆ ಉತ್ತರ ಕೊಡುವವರು ಇಲ್ಲ. ಮೌಲ್ಯಗಳು ಬದುಕಲ್ಲಿ ಕಡಿಮೆ ಆಗುತ್ತಿವೆ. ಆದರೆ ಅದನ್ನೂ ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಶಾಲೆಗಳು ಮಕ್ಕಳಿಗೆ ಉತ್ತಮ ತಂತ್ರಜ್ಞಾನ ಸಹಿತ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಇದು ವೈಜ್ಞಾನಿಕ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಕರ್ತವ್ಯವಾಗಿದೆ. ಇಲ್ಲವಾದರೆ ನಾವು ಸ್ಫರ್ಧಾ ಕ್ಷೇತ್ರದಲ್ಲಿ ಹಿಂದುಳಿಯುತ್ತೇವೆ. ಸಂಶೋಧನೆ ಕಾರ್ಯ ಹೆಚ್ಚಾಗಬೇಕು. ಇದಕ್ಕೆ ಸರ್ಕಾರದ ಜತೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು. ಪಾರದರ್ಶಕತೆ ಇರಬೇಕೆಂದು ಕರೆ ಕೊಟ್ಟರು.
ಜ್ಞಾನ ನಿಂತ ನೀರಾಗಬಾರದು:ಸಿಎಂ ಬಳಿಕ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಐದು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೂ ಉತ್ತಮ ಆಸಕ್ತಿ ಕಂಡಿದ್ದೇನೆ. ವಿಜ್ಞಾನ, ತಂತ್ರಜ್ಞಾನದ ವಿಚಾರದಲ್ಲಿ ಹೊಸ ಆಸಕ್ತಿಗಳನ್ನು ಗಮನಿಸಿದ್ದೇನೆ. ಈ ಐದು ದಿನ ಸಾವಿರಾರು ವಿಜ್ಞಾನಿಗಳು, ಯುವಕರು ಪಾಲ್ಗೊಂಡು ಬೌದ್ಧಿಕ ಜ್ಞಾನ ಹೆಚ್ಚಿಸಿಕೊಂಡಿದ್ದಾರೆ. ಜ್ಞಾನ ನಿಂತ ನೀರಾಗಬಾರದು. ವಿಜ್ಞಾನ, ತಂತ್ರಜ್ಞಾನ ಬೇರೆ ಬೇರೆ ಅಲ್ಲ. ಇವು ಒಂದಾಗಿ ಜನೋಪಕಾರಿಯಾಗಲು ಶ್ರಮಿಸಬೇಕು. ಈ ಕಾರ್ಯಕ್ರಮ ಅದಕ್ಕೆ ಉತ್ತಮ ವೇದಿಕೆಯಾಗಿದೆ. ಉತ್ತಮ ಗುರಿ ಸಾಧಿಸಲು ಇದು ಸಹಕಾರಿಯಾಗಿದೆ. ವಿಜ್ಞಾನಿಗಳು ಇಲ್ಲಿ ತಮ್ಮ ಜ್ಞಾನವನ್ನು ಸಾಮಾನ್ಯ ನಾಗರಿಕರಿಗೆ ಅರಿವುಮೂಡಿಸಲು ಅವಕಾಶವಾಗಿದೆ. ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯ ಮಾಡಿ. ಅದಕ್ಕೆ ಉತ್ತಮ ಅವಕಾಶ ಇದೆ. ಕೃಷಿ ವಿವಿ ಈ ಕಾರ್ಯಕ್ರಮಕ್ಕಾಗಿ ಹಗಲಿರುಳು ಶ್ರಮಿಸಿದೆ. ಪ್ರತಿಯೊಬ್ಬರ ಶ್ರಮಕ್ಕೆ ಫಲಸಿಕ್ಕಿದೆ ಎಂದರು.
ಸಮಾರಂಭದಲ್ಲಿ ಐಎಎಸ್ಸಿಎ ಪ್ರಧಾನ ಅಧ್ಯಕ್ಷ ಪ್ರೊ. ಕೆ.ಎಸ್. ರಂಗಪ್ಪ, 2021ರ ಐಎಎಸ್ಸಿಎ ಕೋಲ್ಕತ್ತಾ ಚುನಾಯಿತ ಪ್ರಧಾನ ಅಧ್ಯಕ್ಷೆ ಪ್ರೋ. ವಿಜಯಲಕ್ಷ್ಮಿ ಸಕ್ಸೇನಾ, ಕೃಷಿ ವಿವಿ ಉಪಕುಲಪತಿ ಪ್ರೋ. ರಾಜೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಸ್ಕಾ ಪ್ರಶಸ್ತಿಯ ವಿವಿಧ ವಿಭಾಗದ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಫ್ರೊ. ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಜ್ಯೋತಿಯನ್ನು 2021ರ ಐಎಎಸ್ಸಿಎ ಕೋಲ್ಕತ್ತಾ ಚುನಾಯಿತ ಪ್ರಧಾನ ಅಧ್ಯಕ್ಷೆ ಪ್ರೋ. ವಿಜಯಲಕ್ಷ್ಮಿ ಸಕ್ಸೇನಾ ಅವರಿಗೆ ಹಸ್ತಾಂತರ ಮಾಡಿದರು.