ಬೆಂಗಳೂರು :ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು, ವಂಚಿಸುತ್ತಿದ್ದ ಮೂವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಮುಜಾಹಿದ್, ಇಕ್ಬಾಲ್ ಮತ್ತು ಆಸಿಫ್ ಬಂಧಿತರಾಗಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಾಲತಾಣಗಳಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಅವರ ಜತೆ ಸಲುಗೆಯಿಂದ ಮಾತಾಡಿ, ಅವರ ಬೆತ್ತಲೆ ವಿಡಿಯೋವನ್ನು ಸೆರೆಹಿಡಿದು ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಸೈಬರ್ ಖದೀಮರು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಸೋಗಿನಲ್ಲಿ ಪುರುಷರನ್ನು ಪರಿಚಯಿಸಿಕೊಂಡು, ಲೈಂಗಿಕ ಸಂಭಾಷಣೆಯಲ್ಲಿ ತೊಡಗುತ್ತಿದ್ದರು. ಬಳಿಕ ಅವರು ಬೆತ್ತಲೆಯಾಗುವಂತೆ ಪ್ರೇರೇಪಿಸುತ್ತಿದ್ದರಂತೆ. ಅವರಿಗೆ ತಿಳಿಯದಂತೆ ನಗ್ನಚಿತ್ರ ಮತ್ತು ವಿಡಿಯೋಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರಂತೆ. ಹಣ ಕೊಡದಿದ್ದರೆ, ವಿಡಿಯೋವನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕತ್ತಿದ್ದರು ಎನ್ನಲಾಗ್ತಿದೆ.
ಜುಲೈ 22 ರಂದು ಸಿಐಡಿಯ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
5 ಸಾವಿರ ಸಿಮ್‌ಕಾರ್ಡ್
ಮುಜಾಹಿದ್, ಸಿಮ್ ಕಾರ್ಡ್ ವಿತರಕರಿಗೆ ನಕಲಿ ದಾಖಲೆ ಒದಗಿಸಿ ಸಿಮ್ ಕಾರ್ಡ್ ಪಾಯಿಂಟ್ ಆಫ್ ಸೇಲ್ ಏಜೆನ್ಸಿಯನ್ನು ಪಡೆದುಕೊಳ್ಳುತ್ತಿದ್ದ. ವಿತರಕರಿಂದ ಸಿಮ್ ಕಾರ್ಡ್‌ಗಳನ್ನು ಪಡೆದು ಆ್ಯಕ್ಟಿವೇಟ್ ಮಾಡುವ ಸಲುವಾಗಿ ಡೆಮೋ ಸಿಮ್ಗಳು ಮತ್ತು ಒಟಿಪಿಗಳನ್ನು ಪಡೆದುಕೊಳ್ತಿದ್ದ. ಈ ಹಿಂದೆ ಡಿಜಿಟಲ್ ವ್ಯಾಲೆಟ್ನೊಂದಿಗೆ ಸಂಪರ್ಕವಿದ್ದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಹಚ್ಚಿದ್ದಾನೆ. ನಕಲಿ ದಾಖಲಾತಿಗಳನ್ನಿಟ್ಟುಕೊಂಡು ತಂಡದ ಸದಸ್ಯರ ಮೂಲಕ ಕಳೆದ 10 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಿಮ್ ಕಾರ್ಡ್ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿದ್ದ ಎಂದು ಹೇಳಲಾಗ್ತಿದೆ.
ದೇಶಾದ್ಯಂತ 3,951 ಮಂದಿಗೆ ವಂಚನೆ
ಸಿಐಡಿ ಸೈಬರ್ ಅಪರಾಧ ವಿಭಾಗವು ಹಂಚಿಕೊಂಡ ಮಾಹಿತಿಯ ಆಧಾರದಲ್ಲಿ, ಕೇಂದ್ರ ಗೃಹ ಸಚಿವಾಲಯದ ಸೈಬರ್ ಸಹಕಾರ ಕೇಂದ್ರವು ಮಾಹಿತಿ ಪಡೆದಿತ್ತು. ಆರೋಪಿಗಳು ದೇಶಾದ್ಯಂತ 3,951 ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಪತ್ತೆಯಾಗಿದೆ ಎಂದು ಅಪರಾಧ ಪತ್ತೆ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಮತ್ತು ಇ -ವ್ಯಾಲೆಟ್ ಸೇವೆಗಳ ಲೋಪದೋಷಗಳ ದುರ್ಬಳಕೆ