ಕರ್ನಾಟಕ

karnataka

ನರೇಗಾ ಯೋಜನೆ: 478.46 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ

By ETV Bharat Karnataka Team

Published : Oct 18, 2023, 6:49 AM IST

ನರೇಗಾ ಯೋಜನೆ ಅಡಿ ವೆಚ್ಚ ಮಾಡಿರುವ 478.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

Vandita Sharma
ವಂದಿತಾ ಶರ್ಮಾ

ಬೆಂಗಳೂರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ರಾಜ್ಯ ಸರ್ಕಾರದಿಂದ ಈಗಾಗಲೇ ಬಳಕೆ ಪ್ರಮಾಣಪತ್ರ ಸಲ್ಲಿಸಲಾಗಿರುವ ವೆಚ್ಚಕ್ಕೆ ಅನುಗುಣವಾಗಿ 478.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶೈಲೇಶ್‌ ಕುಮಾರ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಈಗಾಗಲೇ ಬಳಕೆಯ ಪ್ರಮಾಣ ಪತ್ರಗಳು ಮತ್ತು ವಾರ್ಷಿಕ ಲೆಕ್ಕಪರಿಶೋಧನೆಯ ಖಾತೆಗಳನ್ನು ಸಲ್ಲಿಸಿದೆ. ಕರ್ನಾಟಕಕ್ಕೆ ಕೇಂದ್ರದಿಂದ ದಿನಾಂಕ 29-08-2023 ರಿಂದ ಬಿಡುಗಡೆ ಬಾಕಿ ಉಳಿದಿದೆ ಎಂಬ ಅಂಶವನ್ನು ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ರಾಜ್ಯವು 236 ತಾಲೂಕುಗಳನ್ನು ಒಳಗೊಂಡ 31 ಜಿಲ್ಲೆಗಳನ್ನು ಹೊಂದಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (National Disaster Response Fund) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಮಾನದಂಡಗಳ ಪ್ರಕಾರ, 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 195 ತಾಲೂಕುಗಳ ಪೈಕಿ 161 ತಾಲೂಕುಗಳಲ್ಲಿ ತೀವ್ರ ಬರ, 34 ತಾಲೂಕುಗಳಲ್ಲಿ ಸಾಧಾರಣ ಬರವಿದೆ. ಬರ ಪರಿಸ್ಥಿತಿಯಿಂದಾಗಿ ಗ್ರಾಮೀಣ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ನರೇಗಾ ಉದ್ಯೋಗಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಅವರು ವಾಸ ಮಾಡುವ ಸ್ಥಳಗಳಲ್ಲಿಯೇ ಉದ್ಯೋಗಾವಕಾಶಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ವೇತನ ಪಾವತಿಯಲ್ಲಿನ ವಿಳಂಬದಿಂದಾಗಿ ಕಾರ್ಮಿಕರು ತಮ್ಮ ದೈನಂದಿನ ಅಗತ್ಯಗಳನ್ನು ಎದುರಿಸಲು ಸಾಧ್ಯವಾಗದೇ ಉದ್ಯೋಗವನ್ನು ಅರಸಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗಲು ಪ್ರಾರಂಭಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಕರ್ನಾಟಕ ಸರ್ಕಾರ 2023-24 ರ ಅನುಮೋದಿತ ಕಾರ್ಮಿಕ ಬಜೆಟ್‌ನಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಅಂತಾ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :ಬರ ಪರಿಸ್ಥಿತಿ : ನರೇಗಾ ಮಾನವ ದಿನಗಳು 150ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶಗಳು:

1) ಮಹಾತ್ಮಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಅಕುಶಲ ಕೆಲಸ ಮಾಡಲು ಇಚ್ಛಿಸುವ ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ಸಹಿತ ಕೆಲಸ ನೀಡುವುದು.

2) ಗ್ರಾಮೀಣ ಪ್ರದೇಶಗಳಲ್ಲಿ ಬಾಳಿಕೆ ಬರುವ ಆಸ್ತಿಗಳನ್ನು ಸೃಜನೆ ಮಾಡುವುದು.

3) ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಗ್ರಾಮೀಣ ಜನರ ಜೀವನಾಧಾರ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ :ನರೇಗಾ ಕೂಲಿಕಾರರಿಗೆ ಕೆಲಸ ಒದಗಿಸುವಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಫಸ್ಟ್.. 61.41 ಲಕ್ಷದಷ್ಟು ಮಾನವ ದಿನ ಸೃಜನೆಯೊಂದಿಗೆ ದಾಖಲೆ

ABOUT THE AUTHOR

...view details