ಬೆಂಗಳೂರು: ಕೊರೊನಾ ಮಹಾಮಾರಿಗೆ ತುತ್ತಾದವರು ಸಾಕಷ್ಟು ಮಂದಿ ಬದುಕಿ ಬಂದಿದ್ದಾರೆ. ಆದರೆ ಇದರ ಆತಂಕಕ್ಕೆ ವಿಧಿಸಲಾದ ಲಾಕ್ಡೌನ್ ಸಮಸ್ಯೆಗೆ ತುತ್ತಾದ ಸಾಕಷ್ಟು ವ್ಯಕ್ತಿಗಳು, ಕ್ಷೇತ್ರಗಳು ಚೇತರಿಸಿಕೊಳ್ಳಲಾಗದೆ ಒದ್ದಾಡುತ್ತಿರುವುದು ಗಮನಕ್ಕೆ ಬರುತ್ತಿದೆ.
ಮಾ.24 ರಿಂದ ವಿಧಿಸಿರುವ ಲಾಕ್ಡೌನ್ನಿಂದಾಗಿ ಸಾಕಷ್ಟು ಕ್ಷೇತ್ರಗಳು, ಸಮುದಾಯ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಆರ್ಥಿಕವಾಗಿ ದೊಡ್ಡಮಟ್ಟದ ಸಮಸ್ಯೆಗೆ ತುತ್ತಾಗಿದೆ. ಹಲವು ಕ್ಷೇತ್ರಗಳು ಚೇತರಿಸಿಕೊಳ್ಳಲು ಇನ್ನೂ ವರ್ಷಗಳೇ ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡೂವರೆ ತಿಂಗಳಿಂದ ಲಾಕ್ಡೌನ್ ಜಾರಿಯಲ್ಲಿದ್ದು, ವಿವಿಧ ರೀತಿಯ ವಿನಾಯಿತಿಯ ಹೊರತಾಗಿಯೂ ಸಾಕಷ್ಟು ಕ್ಷೇತ್ರಗಳು ಈಗಲೂ ಸಮಸ್ಯೆಯಿಂದ ನರಳುತ್ತಲೇ ಇವೆ.
ಸಾಮಾನ್ಯವಾಗಿ ಜನರ ಆಗಮನವನ್ನೇ ನಿರೀಕ್ಷಿಸುತ್ತಿದ್ದ ಒಂದಿಷ್ಟು ಉದ್ಯಮಗಳು, ಸೇವಾ ಸಂಸ್ಥೆಗಳು ಇಂದು ತಮ್ಮ ಆಶ್ರಮಗಳನ್ನು ನಡೆಸಲು ಒದ್ದಾಡುತ್ತಿವೆ. ಇಂಥವುಗಳಲ್ಲಿ ಬಹಳ ಮುಖ್ಯವಾಗಿ ಕಾಣಸಿಗುವುದು ಅನಾಥಾಶ್ರಮಗಳು. ಅನಾಥ ಮಕ್ಕಳು, ಅಬಲೆಯರು, ವೃದ್ಧರ ಆಶ್ರಮಗಳು ಇಂದು ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ದಾನಿಗಳಿಂದ ಧನ ಸಂಗ್ರಹಿಸಲಾಗಿದೆ ಕೆಲವರು ಒದ್ದಾಡುತ್ತಿದ್ದರೆ, ಮತ್ತೆ ಕೆಲ ಅನಾಥಾಶ್ರಮಗಳು ಅಥವಾ ಸೇವಾಶ್ರಮಗಳು ದಾನಿಗಳ ಆಗಮನ ಹಾಗೂ ಅವರು ನೀಡುವ ಸಹಾಯ ಸಹಾಯ ಹಸ್ತದಿಂದ ನಡೆಯುತ್ತಿವೆ.
ಖುದ್ದು ದಾನಿಗಳೇ ಆಗಮಿಸಿ ಮಕ್ಕಳು ಹಾಗೂ ಹಿರಿಯ ನಾಗರಿಕರ ಜೊತೆ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇಲ್ಲವೇ ಇನ್ನಿತರ ಸಂಭ್ರಮದ ಕ್ಷಣಗಳನ್ನು ಅನುಭವಿಸಿ ತೆರಳುತ್ತಿದ್ದರು. ಆದರೆ ಲಾಕ್ಡೌನ್ ಸಮಸ್ಯೆ ಇದಕ್ಕೆ ತೊಡಕಾಗಿದೆ. ದಾನಿಗಳು ಬರಲಾಗದ ಕಾರಣದಿಂದ ಅನೇಕ ಸೇವಾಶ್ರಮಗಳು ಸಂಕಷ್ಟಕ್ಕೀಡಾಗಿವೆ. ಇಂಥವುಗಳಲ್ಲಿ ಒಂದು ಬೆಂಗಳೂರಿನ ಬಸವೇಶ್ವರ ನಗರದ ಶಾರದಾ ಸೇವಾಶ್ರಮ. ದಾನಿಗಳು ಆಗಮಿಸಿ ಇಲ್ಲಿನ ಅನಾಥ ಮಕ್ಕಳ ಜೊತೆ ಒಂದಿಷ್ಟು ಸಮಯ ಸಂಭ್ರಮಿಸಿ ಕೈಲಾದ ಸಹಾಯ ಮಾಡಿ ತೆರಳುತ್ತಿದ್ದರು. ಇವರನ್ನೇ ಅವಲಂಬಿಸಿದ್ದ ಸೇವಾಶ್ರಮ ಈಗ ಸಂಕಷ್ಟಕ್ಕೆ ಸಿಲುಕಿದೆ.