ಬೆಂಗಳೂರು: ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಮೂಲಕ ಹೀಗೆ ಮಾಡಿಸಿರಬಹುದು. ಹೀಗಾಗಿ ಚುನಾವಣಾ ಆಯೋಗ ಅನರ್ಹ ಶಾಸಕರ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಸ್ಥಿಕೆ ವಹಿಸಿದೆ ಎಂಬ ಭಾವನೆ ಮೂಡುತ್ತದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ ಮಂಡನೆಯಾದ ಬಳಿಕ ರಾಜ್ಯದ 15 ಕ್ಷೇತ್ರಗಳಿಗೆ ಘೋಷಣೆಗಯಾಗಿದ್ದ ಉಪಚುನಾವಣೆ ಮುಂದೂಡಿಕೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇದೇ ವಿಷಯವಾಗಿ ಪಕ್ಷದ ಕಚೇರಿಯಲ್ಲಿ ಇಂದು ಸಂಜೆ ಸಂಸದೀಯ ಮಂಡಳಿ ಸಭೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಆಯೋಗ ಸುಪ್ರೀಂಕೋರ್ಟ್‌ನಲ್ಲಿ ಉಪಚುನಾವಣೆಯನ್ನು ಮುಂದೂಡಬಹುದು ಎಂದು ಹೇಳಿದೆ. ಹೀಗಾಗಿ ಉಪಚುನಾವಣೆ ಮುಂದೂಡಿಕೆಯಾಗಿದೆ. ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚಿಸಿರಬಹುದು ಎಂದು ಅಭಿಪ್ರಾಯಪಟ್ಟರು.
ಈ ಬೆಳವಣಿಗೆಯಿಂದಾಗಿ ಸ್ವಾಯತ್ತ ಸಂಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಯಡಿಯೂರಪ್ಪನವರ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಇರಬಹುದು ಎಂದರು.