ಬೆಂಗಳೂರು:ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬುಧವಾರ (ಜೂನ್ 12) ಬೆಳಗ್ಗೆ ನಡೆಯಲಿದ್ದು, ಜೆಡಿಎಸ್ ತನ್ನ ಎರಡೂ ಸಚಿವ ಖಾತೆಯನ್ನು ತುಂಬಲು ತೀರ್ಮಾನಿಸಿದೆ. ಈಗಾಗಲೇ ಖಾಲಿಯಿರುವ ಕಾಂಗ್ರೆಸ್ನ ಒಂದು ಹಾಗೂ ಜೆಡಿಎಸ್ನ ಎರಡು ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕರಿಗೆ ನೀಡಲು ತೀರ್ಮಾನಿಸಲಾಗಿದ್ದು, ಪಕ್ಷೇತರರಾದ ರಾಣಿಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ಗೆ ಕಾಂಗ್ರೆಸ್ ಕಡೆಯಿಂದ ಹಾಗೂ ಮುಳುಬಾಗಿಲು ಕ್ಷೇತ್ರದ ಶಾಸಕ ನಾಗೇಶ್ಗೆ ಜೆಡಿಎಸ್ ಕಡೆಯಿಂದ ಸಚಿವರಾಗುವುದು ಪಕ್ಕಾ ಆಗಿದೆ.
ಜೆಡಿಎಸ್ ತನ್ನ ಇನ್ನೊಂದು ಸಚಿವ ಸ್ಥಾನವನ್ನೂ ಕಾಂಗ್ರೆಸ್ಗೆ ಬಿಟ್ಟುಕೊಡಲಿದ್ದು, ಆ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರನ್ನು ತುಂಬುತ್ತಾರೆ ಎಂಬ ಮಾಹಿತಿಯಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ತೀರ್ಮಾನಿಸಿರುವ ಜೆಡಿಎಸ್ ನಾಯಕರು, ಇದಕ್ಕೆ ತಮ್ಮ ಶಾಸಕರನ್ನೇ ಸಚಿವರನ್ನಾಗಿ ಮಾಡುವುದಾಗಿ ತೀರ್ಮಾನಿಸಿದ್ದಾರೆ.
ಅಪ್ಪ ಒಪ್ಪಲಿಲ್ಲ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬಳಿಯಿರುವ ಸಚಿವ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ತೀರ್ಮಾನಿಸಿದ್ದರು. ಈ ಸಂಬಂಧ ಕೈ ನಾಯಕರ ಜತೆ ಸಭೆ ಕೂಡ ನಡೆಸಿದ್ದರು. ಆದರೆ, ಕಡೆಯ ಕ್ಷಣಗಳಲ್ಲಿ ಈ ತೀರ್ಮಾನ ಬದಲಾಗಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಕಾರಣ ಎನ್ನಲಾಗುತ್ತಿದೆ. ತಮ್ಮ ಖಾತೆಯನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಸುತಾರಾಂ ಒಪ್ಪಲಿಲ್ಲ ಎನ್ನಲಾಗುತ್ತಿದೆ.
ಈ ಕಾರಣದಿಂದ ಜೆಡಿಎಸ್ ಖಾಲಿಯಿರುವ ಒಂದು ಸಚಿವ ಸ್ಥಾನಕ್ಕೆ ತಮ್ಮ ಶಾಸಕರನ್ನೇ ಪರಿಗಣಿಸಲು ತೀರ್ಮಾನಿಸಿದೆ. ಈ ಸ್ಥಾನಕ್ಕೆ ಮೊದಲು ಹೆಸರು ಕೇಳಿ ಬಂದಿದ್ದು ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್ ಕೆ ಕುಮಾರಸ್ವಾಮಿ ಅವರು. ಆದರೆ, ಹಾಸನ ಜಿಲ್ಲೆಯಿಂದ ಇನ್ನೊಬ್ಬರು ಸಚಿವರಾಗುವುದು ಬೇಡ ಎಂದ ಸಚಿವ ಹೆಚ್ ಡಿ ರೇವಣ್ಣ ಇದಕ್ಕೆ ತಡೆ ಹಾಕಿದರು. ನಂತರ ಮಳವಳ್ಳಿ ಶಾಸಕ ಅನ್ನದಾನಿ ಹೆಸರು ಕೇಳಿಬಂತು. ಈಗಾಗಲೇ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿರುವ ಕಾರಣ ನಿರಾಕರಿಸಲಾಗಿದೆ ಎನ್ನಲಾಗಿದೆ.
ಅಂತಿಮವಾಗಿ ಅಲ್ಪಸಂಖ್ಯಾತರಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಫಾರುಕ್ ಈಗಾಗಲೇ ರಾಜ್ಯಸಭೆಗೆ ಜೆಡಿಎಸ್ನಿಂದ ಸ್ಪರ್ಧಿಸಿ ಶಾಸಕರ ಅಡ್ಡ ಮತದಾನದಿಂದಾಗಿ ಅವಕಾಶ ಕಳೆದುಕೊಂಡಿದ್ದರು. ಅಲ್ಲದೇ ಜೆಡಿಎಸ್ನಿಂದ ಅಲ್ಪಸಂಖ್ಯಾತ ಮತಗಳು ದೂರವಾಗುತ್ತಿದ್ದು, ಇವೆರಡಕ್ಕೂ ಒಂದೇ ಏಟಿನಲ್ಲಿ ಪರಿಹಾರ ಕಂಡುಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.