ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಾಲಹಳ್ಳಿ ವಾರ್ಡ್ ಸಿದ್ಧಾರ್ಥನಗರದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಜಾಲಹಳ್ಳಿಯಲ್ಲಿ ಬಹಿರಂಗ ಪ್ರಚಾರ ನಡೆಸಲಾಯಿತು.
ವಾಹನದ ಮೂಲಕ ವಿವಿಧ ಮಾರ್ಗಗಳಲ್ಲಿ ತೆರಳಿ ಡಿಕೆ ಶಿವಕುಮಾರ್ ತಮ್ಮ ಅಭ್ಯರ್ಥಿ ಪರ ಮತಯಾಚಿಸಿದರು. ಕಳೆದ ಎರಡು ದಿನಗಳಿಂದ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ನಡೆಸಿದ ಅವರು ಇಂದು ಬೆಂಗಳೂರಿಗೆ ವಾಪಸ್ ಆಗಿದ್ದು, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನೀವೆಲ್ಲರೂ ಮತದಾನ ಮಾಡಬೇಕು. ಕಾಂಗ್ರೆಸ್ಗೆ ಮತ ಹಾಕುವಂತೆ ಇತರರಿಗೂ ಕೂಡ ಮನವಿ ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ನಿಂದ ಬಿರುಸಿನ ಮತ ಪ್ರಚಾರ ಈ ಸಂದರ್ಭ ಮಾತನಾಡಿದ ಡಿಕೆಶಿ, ನೀವು ಮತ ಹಾಕಿ ಐದು ವರ್ಷಕ್ಕೆ ಅಂತಾ ಶಾಸಕರನ್ನಾಗಿ ಮಾಡಿದ್ರಿ. ಆದರೆ, ಹಲವರು ನಿಮ್ಮ ಅನುಮತಿಯಿಲ್ಲದೇ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾದರೂ. ನಿಮ್ಮನ್ನು ಕೇಳದೇ ಪಕ್ಷ ಬಿಟ್ಟು ತಪ್ಪು ಮಾಡಿದವರಿಗೆ ಬುದ್ಧಿ ಕಲಿಸಿ ಅಂತಾ ಮನವಿ ಮಾಡಿದರು.
ಬಿಜೆಪಿಯವರೇ ಸರ್ಕಾರವನ್ನು ಬೀಳಿಸುತ್ತಾರೆ: ಕೊರೊನಾ ಸಂದರ್ಭದಲ್ಲಿಯೂ ಭ್ರಷ್ಟಾಚಾರ ನಡೆಸಿರುವ ಇಂತಹ ಸರ್ಕಾರವನ್ನು ಹೆಚ್ಚು ದಿನ ಉಳಿಯಲು ಅವರ ಪಕ್ಷದವರೇ ಬಿಡಲ್ಲ. ಬಡವರ ಪರ ನಿಲ್ಲದ ಇಂತಹ ಸರ್ಕಾರವನ್ನು ಉಳಿಸಲು ಸಾಧ್ಯವಾ?. ನಾವಲ್ಲ, ಬಿಜೆಪಿ ಪಕ್ಷದವರೇ ಸರ್ಕಾರವನ್ನು ಬೀಳಿಸುತ್ತಾರೆ. ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೂಡ ಕೋವಿಡ್ ಸಂಕಷ್ಟದಲ್ಲಿ ಯಾರೂ ನಿಮ್ಮ ನೆರವಿಗೆ ಬಂದಿಲ್ಲ. ಯಾವ ಪರಿಹಾರ ಕೂಡ ಜನರ ಕೈಸೇರಿಲ್ಲ. ಜನರ ಹೆಸರಿನಲ್ಲಿ ಮಂತ್ರಿಗಳು ಹಾಗೂ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಯಾವ ನಾಗರಿಕರಿಗೂ ಉಚಿತ ಚಿಕಿತ್ಸೆ ಆಗಲಿ ಸೂಕ್ತ ಸೌಲಭ್ಯವಾಗಲಿ ಸಿಗಲಿಲ್ಲ. ಬಿಜೆಪಿ ಸರ್ಕಾರದ ಈ ವೈಫಲ್ಯಕ್ಕೆ ಮತದಾರರಾದ ನೀವು ಉತ್ತರ ಕೊಡಬೇಕೆಂದು ತಿಳಿಸಿದರು.
ನಮ್ಮ ಪಕ್ಷದಿಂದ ನೊಂದ ಹಾಗೂ ಬೆಂದ ಹೆಣ್ಣು ಮಗಳಾದ ಕುಸುಮ ಹನುಮಂತರಾಯಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೇವೆ. ಅವರಿಗೆ ಮತ ನೀಡಿ. ಬಿಜೆಪಿ ಅಭ್ಯರ್ಥಿಗೆ ಅವರ ಪಕ್ಷ 50 ಕೋಟಿ ರೂಪಾಯಿ ಹಣ ನೀಡಿದೆ. ಹೀಗಾಗಿ ಅವರು ಹಣಕೊಟ್ಟರೆ ಬೇಡ ಅನ್ನಬೇಡಿ, ತೆಗೆದುಕೊಳ್ಳಿ ಎಂದರು.
ಇನ್ನೂ ಹಲವೆಡೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಯಾರೂ ಕೂಡ ತಲೆ ಕೆಡಿಸಿಕೊಳ್ಳಬೇಡಿ. ಏನೇ ಆದರೂ ನಿಮ್ಮ ಜವಾಬ್ದಾರಿ ನಮ್ಮ ಪಕ್ಷದ ನಾಯಕರಿಗೆ ಇದೆ. ನಿಮ್ಮ ಬೆನ್ನಿಗೆ ನಾವು ನಿಲ್ಲುತ್ತೇವೆ ಎಂದು ಭರವಸೆ ಕೊಟ್ಟರು.