ಬೆಂಗಳೂರು: ಐಪಿಸಿ ಸೆಕ್ಷನ್ 370 ರ ಅಡಿ ಮಾನವ ಕಳ್ಳಸಾಗಣೆ ಆರೋಪ ಪ್ರಕರಣ ದಾಖಲಿಸುವಾಗ ಈ ಸೆಕ್ಷನ್ನ ಮೂಲ ಆಶಯವನ್ನು ಮರೆಯಬಾರದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾನವ ಕಳ್ಳಸಾಗಣೆ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೃತಸರದ ರಾಜ್‌ಕುಮಾರ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ:2019ರ ಜುಲೈ 20ರಂದು ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ವಲಸೆ ಅಧಿಕಾರಿ (ಇಮ್ಮಿಗ್ರೇಷನ್ ಆಫೀಸರ್) ಮೂವರು ಭಾರತೀಯ ವ್ಯಕ್ತಿಗಳು ಇಂಡಿಗೋ ವಿಮಾನದ ಮೂಲಕ ಮಲೇಷಿಯಾದ ಕೌಲಾಲಂಪುರಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದುದನ್ನು ಗಮನಿಸಿದ್ದರು. ಈ ವೇಳೆ ಪ್ರಯಾಣಿಕರನ್ನು ಪ್ರಶ್ನಿಸಿದಾಗ ಅವರು ಒಟ್ಟಾಗಿ ರಾಜಕುಮಾರ್ ಎಂಬುವರ ಜತೆ ಪ್ರವಾಸಿ ವೀಸಾ ಮೂಲಕ ಕೆಲಸಕ್ಕಾಗಿ ಕೌಲಾಲಂಪುರಕ್ಕೆ ಹೊರಟಿರುವುದು ಬೆಳಕಿಗೆ ಬಂದಿತ್ತು. ಮತ್ತಷ್ಟು ವಿಚಾರಿಸಿದಾಗ ಅಮೃತಸರದ ಮಧ್ಯವರ್ತಿ ಕಿರಣ್ ಎಂಬಾತನ ಮೂಲಕ ಪರಿಚಯವಾದ ರಾಜ್ ಕುಮಾರ್ಗೆ ಕೆಲಸಕ್ಕಾಗಿ ಮೂವರೂ ಹಣ ನೀಡಿದ್ದು ಕೂಡ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಲಸೆ ಅಧಿಕಾರಿಗಳು ಐಪಿಸಿ ಸೆಕ್ಷನ್ 370 ರಡಿ ರಾಜ್ ಕುಮಾರ್ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಜೆಎಂಎಫ್ಸಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ರದ್ದು ಕೋರಿ ರಾಜಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.