ಬೆಂಗಳೂರು: ಅಕ್ಷರ ಮಾಂತ್ರಿಕ ಬೆಳಗೆರೆ ಒಟ್ಟಿಗೆ 6 ಪುಸ್ತಕಗಳನ್ನು ಬರೆಯುತ್ತಿದ್ದರು. ಅಷ್ಟೂ ಪುಸ್ತಕಗಳನ್ನು ಒಟ್ಟಿಗೆ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ. ಹಾಗೇ ಅದೆಷ್ಟೋ ಜನರ ಚರಿತ್ರೆ ಗೀಚಿದ್ದ ಅವರು ತಮ್ಮ ಆತ್ಮಚರಿತ್ರೆ ಬರೆಯಲಾರಂಭಿಸಿದ್ದರು. ಆದರೆ, ಅದನ್ನೀಗ ಅಪೂರ್ಣವಾಗಿಸಿ ಬಾರದಲೋಕಕ್ಕೆ ತೆರಳಿದ್ದಾರೆ.
ಬೆಳಗೆರೆ ಪ್ರಸ್ತುತ ಬರೆಯುತ್ತಿದ್ದ ಪುಸ್ತಕಗಳು ರಾಜ್ಯ ರಾಜಕಾರಣದ ಕುರಿತಾಗಿತ್ತು. ಆ ಮೂಲಕ ಅವರು ಹಲವು ರಾಜಕೀಯ ನಾಯಕರ ಬಗೆಗಿನ ರೋಚಕ ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಿದ್ಧತೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಹಾಗೆ ಅವರು ತಮ್ಮ ಆತ್ಮಚರಿತ್ರೆಯನ್ನು ಹೊರತರುವ ಸಿದ್ಧತೆಯಲ್ಲಿದ್ದರು. ತಮ್ಮ ಜೀವನದುದ್ದಕ್ಕೂ ರವಿ ಬೆಳಗೆರೆ ಎದುರಿಸಿದ ಸವಾಲುಗಳನ್ನು ಅದರಲ್ಲಿ ಕಟ್ಟಿಕೊಟ್ಟಿದ್ದರು ಎನ್ನಲಾಗಿದೆ. ಆದರೆ, ಅಕ್ಷರ ಮಾತ್ರಿಕನ ಈ ಅಕಾಲಿಕ ಮರಣ ಆತ್ಮಚರಿತ್ರೆ ಹೊರತರುವ ಕನಸನ್ನು ಅಪೂರ್ಣಗೊಳಿಸಿತು.
ತಂದೆಯ ನಿಧನದ ಬಗ್ಗೆ ರವಿ ಬೆಳಗೆರೆ ಪುತ್ರ ಕರ್ಣ ಬೆಳಗೆರೆ ಮಾಹಿತಿ ನೀಡಿದ್ದಾರೆ. ರಾತ್ರಿ ಸುಮಾರು 12:15ರ ವೇಳೆಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ಹೋಗುವಷ್ಟರಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದರು. ಬೆಳಗ್ಗೆ 9 ಗಂಟೆಗೆ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅವರ ಅಭಿಮಾನಿಗಳು ಬಂದು ಅಂತಿಮ ದರ್ಶನ ಮಾಡಿಕೊಳ್ಳಬಹುದು. ಬಳಿಕ ಸಂಜೆ ನಾಲ್ಕು ಗಂಟೆಯೊಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ. ರವಿ ಬೆಳಗೆರೆ ಅವರ ಪಾರ್ಥಿವ ಶರೀರವನ್ನು ಕರಿಷ್ಮಾ ಹಿಲ್ಸ್ ನ ಅವರ ನಿವಾಸದಲ್ಲಿ ಇರಿಸಲಾಗಿದೆ.
ರಾತ್ರಿ 12:15ರ ಸುಮಾರಿಗೆ ಹಾಯ್ ಬೆಂಗಳೂರು ಕಚೇರಿಯಲ್ಲಿದ್ದಾಗಲೇ ರವಿ ಬೆಳಗೆರೆ ಅವರಿಗೆ ಹೃದಯಾಘಾತವಾಗಿದ್ದು, ನಂತರ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಮಾರು 2:30ರ ವೇಳೆಗೆ ರವಿ ಬೆಳಗೆರೆ ನಿಧನರಾಗಿದ್ದಾರೆ.
ಬೆಳಗೆರೆ ಅವರಿಗೆ ಇಬ್ಬರು ಪತ್ನಿಯರು, ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ. ಇವರಿಗೆ ಒಟ್ಟು ನಾಲ್ಕು ಮಂದಿ ಮಕ್ಕಳು. ಕರ್ಣ ಬೆಳಗೆರೆ, ಭಾವನಾ ಬೆಳಗೆರೆ, ಚೇತನಾ ಬೆಳಗೆರೆ ಮತ್ತು ಹಿಮವಂತ ಬೆಳಗೆರೆ.