ಕರ್ನಾಟಕ

karnataka

ETV Bharat / state

ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಣ ಕೋಟಿ ಕೋಟಿ... ಸರ್ಕಾರದ ಲೆಕ್ಕಾಚಾರ ಎಷ್ಟು?

ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೋಟ್ಯಂತರ ರೂಪಾಯಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಕಬ್ಬು ಬೆಳೆಗಾರರ ಪ್ರಕಾರ ಸಕ್ಕರೆ ಕಾರ್ಖಾನೆಗಳು 700 ಕೋಟಿ ರೂ. ಬಾಕಿ ಬಿಲ್ ಉಳಿಸಿಕೊಂಡಿದ್ದರೆ, ಸರ್ಕಾರದ ಪ್ರಕಾರ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಬಿಲ್ ಮೊತ್ತ 195 ಕೋಟಿ ರೂಪಾಯಿ.

the-amount-that-sugar-factories-to-return-farmers
ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಣ ಕೋಟಿ ಕೋಟಿ... ಆದರೆ, ರಾಜಕಾರಣಿಗಳ ಲೆಕ್ಕಾಚಾರ ಎಷ್ಟು?

By

Published : Oct 17, 2020, 8:35 AM IST

ಬೆಂಗಳೂರು:ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೋಟ್ಯಂತರ ರೂಪಾಯಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಕಬ್ಬು ಬೆಳೆಗಾರರ ಪ್ರಕಾರ ಸಕ್ಕರೆ ಕಾರ್ಖಾನೆಗಳು 700 ಕೋಟಿ ರೂ. ಬಾಕಿ ಬಿಲ್ ಉಳಿಸಿಕೊಂಡಿದ್ದರೆ, ಸರ್ಕಾರದ ಪ್ರಕಾರ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಬಿಲ್ ಮೊತ್ತ 195 ಕೋಟಿ ರೂಪಾಯಿ.

ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಣ ಕೋಟಿ ಕೋಟಿ

ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ಮಧ್ಯೆ ಬಾಕಿ‌ ಬಿಲ್ ಕಿರಿಕ್ ಜೋರಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರ (FRP)ವನ್ನು ಕಬ್ಬಿನ ಬೆಳೆಗಾರರು ತಿರಸ್ಕರಿಸಿದ್ದು, ಪ್ರತಿ ಟನ್​​ಗೆ 3,300 ರೂ. ದರ ನೀಡುವಂತೆ ಆಗ್ರಹಿಸಿದ್ದಾರೆ. ಇತ್ತ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಬಾಕಿ ಬಿಲ್ ಶೀಘ್ರವಾಗಿ ಪಾವತಿಸುವಂತೆ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸಕ್ಕರೆ ‌ಕಾರ್ಖಾನೆಗಳು‌ ಮಾತ್ರ ಹಲವು ವರ್ಷಗಳಿಂದ ರೈತರಿಗೆ ಬಿಲ್ ‌ನೀಡದೆ ಸತಾಯಿಸುತ್ತಿವೆ. ಸದ್ಯ ಕಬ್ಬು ಬೆಳೆಗಾರರ ಪ್ರಕಾರ ಸಕ್ಕರೆ‌ ಕಾರ್ಖಾನೆಗಳು ಸುಮಾರು 700 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ. ಆದರೆ ಸರ್ಕಾರ ಮಾತ್ರ ಬಾಕಿ ಉಳಿದುಕೊಂಡಿರುವ ಬಿಲ್ ಮೊತ್ತ 195 ಕೋಟಿ ಮಾತ್ರ ಅಂತಿದೆ.

ಯಾವ ಕಾರ್ಖಾನೆಗಳಿಂದ ಎಷ್ಟು ಬಾಕಿ?:

ಕಬ್ಬು ಖರೀದಿ ದರ‌ ನಿಗದಿ ಮಂಡಳಿ ಸಭೆಯಲ್ಲಿ ಸರ್ಕಾರ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಬಿಲ್ ಮೊತ್ತದ ವರದಿಯನ್ನು ರೈತರಿಗೆ ನೀಡಿದೆ. ಅದರಂತೆ ಜೂನ್​​ವರೆಗೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ 195 ಕೋಟಿ ರೂಪಾಯಿಯಷ್ಟು ಹಣವನ್ನು ಬಾಕಿ ಉಳಿಸಿಕೊಂಡಿವೆ.

ಅದರಂತೆ ಬೆಳಗಾವಿಯ ಮಲಪ್ರಭಾ ಸಕ್ಕರೆ‌ ಕಾರ್ಖಾನೆ ಸುಮಾರು 20.21 ಕೋಟಿ ರೂಪಾಯಿ, ಬೆಳಗಾವಿಯ ಸೋಮೇಶ್ವರ ಸಕ್ಕರೆ ಕಾರ್ಖಾನೆ 9.73 ಕೋಟಿ ರೂಪಾಯಿ, ಅದೇ ರೀತಿ ಉಗರ್ ಶುಗರ್ ಕಾರ್ಖಾನೆ ಸುಮಾರು 5.62 ಕೋಟಿ ರೂ. ಬಿಲ್​​ ಬಾಕಿ ಉಳಿಸಿಕೊಂಡಿದೆ.

ಶಾಸಕ ಮುರುಗೇಶ್ ನಿರಾಣಿಗೆ ಸೇರಿದ ನಿರಾಣಿ ಶುಗರ್ಸ್ ಸುಮಾರು 4.18 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಚಾಮರಾಜನಗರದ ಬಮ್ಮರಿ ಅಮ್ಮನ್ ಸಕ್ಕರೆ ಕಾರ್ಖಾನೆ ಸುಮಾರು 23.72 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಮಂಡ್ಯದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸುಮಾರು 79 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ‌ ಕೋರಮಂಗಲ ಸಕ್ಕರೆ ಕಾರ್ಖಾನೆ 19.18 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ 16.39 ಕೋಟಿ ರೂ. ಹಣವನ್ನು ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಮೈಸೂರಿನ ಬಮ್ಮರಿ ಅಮ್ಮನ್ ಸಕ್ಕರೆ ಕಾರ್ಖಾನೆ 17.22 ಕೋಟಿ ರೂ. ಬಾಕಿ ಬಿಲ್‌ ಉಳಿಸಿಕೊಂಡಿದೆ.

ಫೆಬ್ರವರಿಯಲ್ಲಿ ಬಾಕಿ ಬಿಲ್ ಮೊತ್ತ ಎಷ್ಟಿತ್ತು?:

ಫೆಬ್ರವರಿಯಲ್ಲಿ ಸರ್ಕಾರ ಬಾಕಿ ಬಿಲ್ ಮೊತ್ತದ ಬಗ್ಗೆ ನೀಡಿದ ವರದಿ ಪ್ರಕಾರ 72 ಸಕ್ಕರೆ ಕಾರ್ಖಾನೆಗಳು ಸುಮಾರು 2798 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿವೆ.

ಅದೇ ಜೂನ್ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆಗಳ ಬಾಕಿ ಮೊತ್ತ 195 ಕೋಟಿ ರೂ‌. ಎಂದು ಸರ್ಕಾರ ವರದಿ ನೀಡಿದೆ. ಸಕ್ಕರೆ ಕಾರ್ಖಾನೆಗಳು 700 ಕೋಟಿ ರೂ‌. ಬಾಕಿ ಉಳಿಸಿಕೊಂಡಿವೆ. ಐದು ತಿಂಗಳಲ್ಲಿ 2798 ಕೋಟಿ ರೂ. ಇದ್ದ ಬಾಕಿ ಬಿಲ್‌ ಮೊತ್ತ 195 ಕೋಟಿ ರೂ.ಗೆ ಇಳಿಕೆಯಾಗಲು ಸಾಧ್ಯವಿಲ್ಲ. ಕಾರ್ಖಾನೆಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿವೆ ಎಂದು ರೈತರು ಆರೋಪಿಸಿದ್ದಾರೆ‌.

ಫೆಬ್ರವರಿ ವರದಿಯಂತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ್ ಮಾಲೀಕತ್ವದ ಬೀಳಗಿ ಶುಗರ್ಸ್ 123.76 ಕೋಟಿ, ಕುಂದರಗಿಯ ಜೆಮ್ ಶುಗರ್ಸ್ 62.09 ಕೋಟಿ, ಕಾಂಗ್ರೆಸ್ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಮಾಲೀಕತ್ವದ ಉತ್ತೂರಿನ ಇಂಡಿಯನ್ ಕೇನ್ ಪವರ್ ಲಿ. 142.70 ಕೋಟಿ, ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವದ ಜಮಖಂಡಿ ಶುಗರ್ಸ್ 37.03 ಕೋಟಿ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಮಾಲೀಕತ್ವದ ಮುಧೋಳದ ನಿರಾಣಿ ಶುಗರ್ಸ್ 109.64 ಕೋಟಿ, ಬಿಜೆಪಿ ಮುಖಂಡ ಜಗದೀಶ್ ಗುಡಗುಂಟಿ ಮಾಲೀಕತ್ವದ ಸಿದ್ದಾಪುರದ ಪ್ರಭುಲಿಂಗೇಶ್ವರ ಶುಗರ್ಸ್ 144.54 ಕೋಟಿ, ಮುರುಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಮಾಲೀಕತ್ವದ ಹಿಪ್ಪರಗಿಯ ಶ್ರೀ ಸಾಯಿಪ್ರೀಯಾ ಶುಗರ್ಸ್ 109.22 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದವು.

ಸಕ್ಕರೆ ಕಾರ್ಖಾನೆಗಳು ತಪ್ಪು ಮಾಹಿತಿ ನೀಡುತ್ತಿವೆ:

ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಸಂಬಂಧ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು ಸಹಿ ಮಾಡಿದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಓದುತ್ತಿದೆ.‌ ಇದು ಸರಿಯಾದ ಕ್ರಮವಲ್ಲ. ಹಲವು ಸಕ್ಕರೆ ಕಾರ್ಖಾನೆಗಳು ಹಲವು ವರ್ಷಗಳಿಂದ ರೈತರಿಗೆ ಹಣವನ್ನೇ ಪಾವತಿಸಿಲ್ಲ. ಆದರೆ ನಾವು ಹಣವನ್ನು ಪಾವತಿ ಮಾಡಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸುಮಾರು 700 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಆರೋಪಿಸಿದ್ದಾರೆ.

ಗುರುವಾರ ನಡೆದ ಸಭೆಯಲ್ಲೂ ಸಕ್ಕರೆ ಸಚಿವರಿಗೆ ಈ ಸಂಬಂಧ ಮನವರಿಕೆ ಮಾಡಿದ್ದೇವೆ. ಸಕ್ಕರೆ ಕಾರ್ಖಾನೆಗಳು ತಾವು ರೈತರಿಗೆ ಪಾವತಿಸಿದ ಬಿಲ್ ಮೊತ್ತದ ಮಾಹಿತಿಯನ್ನು ಅಫಿಡವಿಟ್ ಮೂಲಕ‌ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ತಪ್ಪು ಮಾಹಿತಿ ನೀಡುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿದ್ದೇವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಕ್ಕರೆ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details