ಬೆಂಗಳೂರು: ಇಲ್ಲಿನ ಅಪಾರ್ಟ್ ಮೆಂಟ್ನ ನಾಲ್ಕನೇ ಮಹಡಿಯಿಂದ ಶನಿವಾರ ಗಗನಸಖಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಯುವತಿಯ ಪ್ರಿಯಕರನ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಯುವಕ ಆದೇಶ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅರ್ಚನಾ ಧಿಮಾನ್ (28) ಅನುಮಾನಾಸ್ಪದವಾಗಿ ಮೃತಪಟ್ಟ ಗಗನಸಖಿ.
ತಮ್ಮ ಮಗಳ ಸಾವು ಅನುಮಾನಸ್ಪಾದವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಅರ್ಚನಾ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರತಿಷ್ಠಿತ ವಿಮಾನಯಾನ ಕಂಪೆನಿಯೊಂದರಲ್ಲಿ ಗಗನಸಖಿಯಾಗಿ ಅರ್ಚನಾ ಕೆಲಸ ಮಾಡುತ್ತಿದ್ದಳು. ಆದೇಶ್, ನಗರದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅರ್ಚನಾ ಮತ್ತು ಆದೇಶ್ ಪ್ರೀತಿಸುತ್ತಿದ್ದರು. ಅಂತೆಯೇ ಆದೇಶ್ನನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ದುಬೈನಿಂದ ಬೆಂಗಳೂರಿಗೆ ಅರ್ಚನಾ ಬಂದಿದ್ದಳು. ಆದೇಶ್ ಮತ್ತು ಅರ್ಚನಾ ಮಧ್ಯೆ ಶನಿವಾರ ಜಗಳವಾಗಿದ್ದು, ಆ ಬಳಿಕ ರಾತ್ರಿ ಅಪಾರ್ಟ್ಮೆಂಟ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಳು. ಈ ಬಗ್ಗೆ ಯುವತಿ ಪೋಷಕರು ಅನುಮಾನ ವ್ಯಕ್ತಪಡಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಡೇಟಿಂಗ್ ಆ್ಯಪ್ ಮುಖಾಂತರ ಕೆಲವರ್ಷಗಳ ಹಿಂದೆ ಇಬ್ಬರ ಮಧ್ಯೆ ಪರಿಚಯವಾಗಿ, ಪ್ರೀತಿಯಲ್ಲಿದ್ದರು. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರು ತಿಂಗಳ ಹಿಂದೆ ದೂರವಾಗಿದ್ದರು. ಈ ಮಧ್ಯೆ ಕಳೆದ ಮೂರು ದಿನಗಳ ಹಿಂದೆ ದುಬೈನಿಂದ ಬಂದಿದ್ದ ಗಗನಸಖಿಯು ಆದೇಶ್ ನನ್ನ ಭೇಟಿಯಾಗಿದ್ದಳು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಗಲಾಟೆ ತಾರಕಕ್ಕೇರಿದೆ. ಆಗ ಕೋರಮಂಗಲದ 8ನೇ ಹಂತದ ರೇಣುಕಾ ಅಪಾರ್ಟ್ ಮೆಂಟ್ನ ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.