ಲ್ಯಾಪ್‌ಟಾಪ್, ಮೊಬೈಲ್ಸ್ ಕಳ್ಳತನ ಬೆಂಗಳೂರು : ಪಿಜಿ, ಬ್ಯಾಚುಲರ್ಸ್ ರೂಮುಗಳಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡುತ್ತಿದ್ದ ಶ್ರೀನಾಥ್, ಆತನಿಂದ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಸೆಲ್ವನ್ ಹಾಗೂ ಮಂಜು ಬಂಧಿತ ಆರೋಪಿಗಳು. ಬಂಧಿತರಿಂದ 75 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಹಳೆಯ ರೂಢಿಗತ ಆರೋಪಿಯಾಗಿರುವ ಶ್ರೀನಾಥ್ 2019ರಲ್ಲಿ ಆರ್ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಬೆಂಗಳೂರು ನಗರದ ವಿವಿಧೆಡೆ ಬೆಳಗಿನಜಾವ ಪಿಜಿ, ಬ್ಯಾಚುಲರ್ಸ್ ರೂಮುಗಳ ಬಳಿ ಹೋಗುತ್ತಿದ್ದ ಆರೋಪಿ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿ ಆಗುತ್ತಿದ್ದ.
ನಂತರ ಅವುಗಳನ್ನ ಸೆಲ್ವನ್ ಹಾಗೂ ಮಂಜುಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸದಾಶಿವನಗರ ಠಾಣಾ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ಆತ ಕಳ್ಳತನ ಮಾಡಿದ್ದ 133 ಲ್ಯಾಪ್‌ಟಾಪ್‌ಗಳು, 19 ಮೊಬೈಲ್ ಫೋನ್‌ಗಳು ಹಾಗೂ 4 ಟ್ಯಾಬ್ಲೆಟ್‌ಗಳನ್ನ ವಶಕ್ಕೆ ಪಡೆದುಕೊಂಡಿದೆ.
ಪ್ರತ್ಯೇಕ ಪ್ರಕರಣ- ವಜ್ರ, ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿ :ಶಾಸಕ ಎಸ್ ಆರ್ ವಿಶ್ವನಾಥ್ ಅವರ ಬಾಮೈದ ರಾಮಮೂರ್ತಿ ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಮನೆಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರ, ನಗದು, ವಾಚ್ಗಳು, ಗೃಹೋಪಯೋಗಿ ವಸ್ತುಗಳು ಕೂಡ ಕಳ್ಳತನವಾಗಿವೆ ಎಂದು ಯಲಹಂಕ ಠಾಣೆಗೆ ರಾಮಮೂರ್ತಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾಗಿರುವ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ಈ ದೊಡ್ಡ ಮಟ್ಟದ ಕಳ್ಳತನವಾಗಿದೆ. ಬಿಬಿಎಂಪಿ ಗುತ್ತಿಗೆದಾರ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಬಾಮೈದುನ ಆಗಿರುವ ರಾಮಮೂರ್ತಿಯವರು ಮೂರು ದಿನಗಳ ಹಿಂದೆ ಕೆಲಸದ ವಿಚಾರವಾಗಿ ಬೇರೆಡೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಬೆಲೆ ಬಾಳುವ ವಾಚ್ಗಳೊಂದಿಗೆ ಮನೆಯ ವಸ್ತುಗಳನ್ನು ಕದ್ದು ಪರಾರಾರಿಯಾಗಿದ್ದಾರೆ.
ಕಳ್ಳನೊಂದಿಗೆ ಶಾಮೀಲಾಗಿದ್ದ ರೈಲ್ವೆ ಹೆಡ್ಕಾನ್ಸ್ಟೇಬಲ್ ಅರೆಸ್ಟ್:ಬೇಲಿಯೇ ಎದ್ದು ಹೊಲ ಮೇಯ್ದಂತೆ ಖದೀಮರನ್ನು ಸದೆಬಡಿಯಬೇಕಾದ ರೈಲ್ವೆ ಹೆಡ್ಕಾನ್ಸ್ಟೇಬಲ್ ಬಬ್ಬರನ್ನು ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನವೆಸಗುತ್ತಿದ್ದ ಜಾಲದೊಂದಿಗೆ ಬಂಧಿಸಿರುವ ಘಟನೆ ಸೋಮವಾರ ನಡೆದಿತ್ತು. ಬೆಂಗಳೂರು ದಂಡು ರೈಲ್ವೆ ಪೊಲೀಸರು ಈ ಪ್ರಕರಣ ಪತ್ತೆ ಹಚ್ಚಿದ್ದರು.
ಇದನ್ನೂ ಓದಿ :ಕ್ಯಾಸಿನೊ ಆಟದ ಗೀಳು; ಚಿನ್ನದ ವ್ಯಾಪಾರಿ ಮನೆಯಲ್ಲಿ ಗೋಲ್ಡ್ ಕದ್ದಿದ್ದ ಆರೋಪಿ ಬಂಧನ