ಬೆಂಗಳೂರು :ಕ್ಯಾಸಿನೊದಲ್ಲಿ ಜೂಜಾಡಲು ಆಭರಣ ಮಾಲೀಕರ ಮನೆಯ ದೇವರ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಖದೀಮನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನರ್ಗತಪೇಟೆಯಲ್ಲಿ ಸಗಟು ಚಿನ್ನದ ವ್ಯಾಪಾರಿಯಾಗಿದ್ದ ರಾಮ್‌ಲಾಲ್ ಎಂಬುವರು ನೀಡಿದ ದೂರಿದ ಮೇರೆಗೆ ಆರೋಪಿ ಮೋಹನ್ ಲಾಲ್ ಎಂಬಾತನನ್ನು ಬಂಧಿಸಿ, 84 ಲಕ್ಷ ಮೌಲ್ಯದ 1399 ಗ್ರಾಂ ಚಿನ್ನಾಭರಣ ಹಾಗೂ ಗಟ್ಟಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ರಾಮ್‌ಲಾಲ್, ಮೋಹನ್ ಲಾಲ್ ಇಬ್ಬರು ರಾಜಸ್ಥಾನದ ಪಾಲಿ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಚಿನ್ನ ವ್ಯಾಪಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಹೋಲ್ಸೇಲ್ ದರದಲ್ಲಿ ಚಿನ್ನವನ್ನು ರಾಮ್‌ಲಾಲ್ ಮಾರಾಟ ಮಾಡಿದರೆ, ಆರೋಪಿ ಮೋಹನ್ಲಾಲ್ ರಿಟೇಲ್ ರೀತಿ ಚಿನ್ನಾಭರಣ ಮಾರಾಟ ಮಾಡುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ರಾಮ್‌ಲಾಲ್ ಬಳಿ ಸುಮಾರು 3 ಕೆ.ಜಿ ಚಿನ್ನ ಪಡೆದುಕೊಂಡಿದ್ದ ಮೋಹನ್ ಲಾಲ್, ಹಲವು ತಿಂಗಳಾದರೂ ಹಣ ಕೊಟ್ಟಿರಲಿಲ್ಲ. ಈ ಬಗ್ಗೆ ಮಾತನಾಡುವುದಕ್ಕೆ ಕಳೆದ ತಿಂಗಳು 25ರಂದು ರಾಮ್‌ಲಾಲ್ ಅವರು ಮೋಹನ್ನನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು. ಈ ವೇಳೆ ಬಾತ್ರೂಮ್ಗೆ ಹೋಗಿ ಬರುವಷ್ಟರಲ್ಲೇ ದೇವರ ಕಪಾಟಿನ ಹಿಂದೆ ಇಟ್ಟಿದ್ದ 155 ಗ್ರಾಂ ಚಿನ್ನವನ್ನು ಮೋಹನ್ ಕಳ್ಳತನ ಮಾಡಿದ್ದ. ಕೆಲಹೊತ್ತಿನ ಬಳಿಕ ಗಮನಿಸಿದಾಗ ಚಿನ್ನ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಮನೆ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಕವರ್ನಲ್ಲಿ ಚಿನ್ನ ಎತ್ತಿಕೊಂಡು ಹೋಗುತ್ತಿರುವುದು ಗೊತ್ತಾಗಿತ್ತು. ಈ ಸಂಬಂಧ ರಾಮ್‌ಲಾಲ್ ಸಂಪಂಗಿರಾಮನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎಂ ಎ ಹರೀಶ್ ಕುಮಾರ್ ಹಾಗೂ ಪಿಎಸ್ಐ ಅರಳನಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದೆ.