ಬೆಂಗಳೂರು:ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಗೈರು ಹಾಜರಾಗಿರುವುದಕ್ಕೆ ಗರಂ ಆದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗರಂ ಪ್ರಶ್ನೋತ್ತರ ಅವಧಿ ಮುಗಿದ ನಂತರ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಗ್ಯಾಲರಿಯಲ್ಲಿ ಬೆರಳೆಣಿಕೆಯ ಅಧಿಕಾರಿಗಳು ಮಾತ್ರ ಇದ್ದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, ನಾವು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಅವರೆಲ್ಲ ಏರ್ ಶೋ ನೋಡಲು ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದರು. ನಾನು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದೇನೆ. ಒಬ್ಬನೇ ಒಬ್ಬ ಅಧಿಕಾರಿ ಇಲ್ಲ ಎಂದರೆ ಸರ್ಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಅವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ರಾಜ್ಯದ ಹಿತದ ಬಗ್ಗೆ ಚರ್ಚಿಸುತ್ತಿದ್ದೇವೆ. ಅಧಿಕಾರಿಗಳೇ ಇಲ್ಲ ಎಂದರೆ ಹೇಗೆ? ನಾವು ಇವತ್ತು ಇಲ್ಲಿ, ನಾಳೆ ಅಲ್ಲಿಗೆ ಬರಬಹುದು, ನೀವು ಇಲ್ಲಿಗೆ ಬರಬಹುದು. ಆದರೆ, ಅಧಿಕಾರಿಗಳು ಇಲ್ಲೇ ಇರುತ್ತಾರೆ. ನಾವು ಪ್ರತಿಪಕ್ಷದ ನಾಯಕನಾಗಿ ಮಾತನಾಡುತ್ತಿದ್ದೇನೆ. ಅಧಿಕಾರಿಗಳು ಇಲ್ಲವೆಂದರೆ ಭಾಷಣ ಮಾಡುವುದು ಯಾರಿಗೆ, ನಾಚಿಕೆಯಾಗಬೇಕು ಅವರಿಗೆ ಎಂದು ಕಿಡಿಕಾರಿದರು.
ಮುಖ್ಯ ಕಾರ್ಯದರ್ಶಿಗಳಿಲ್ಲ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಇಲ್ಲ. 12 ರಿಂದ 13 ಮಂದಿ ಹೆಚ್ಚುವರಿ ಕಾರ್ಯದರ್ಶಿಗಳಿರಬೇಕು. ಒಬ್ಬರೂ ಇಲ್ಲ ಎಂದರೆ ಇದೇನು ಸರ್ಕಾರವೇ ಎಂದು ಕಿಡಿಕಾರಿದರು. ಹಣಕಾಸು, ಅಬಕಾರಿ ಕಾರ್ಯದರ್ಶಿಗಳೂ ಇಲ್ಲ. ನಾವು ಯಾರಿಗೆ ಹೇಳಬೇಕು? ಯಾರಿಗೆ ಕೇಳಬೇಕು? ಎಲ್ಲರೂ ಏರೋ ಶೋ ನೋಡಲು ಹೋಗಿರಬೇಕು ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಾಸಕ ರಮೇಶ್ ಕುಮಾರ್ ಮಾತನಾಡಿ, ಕಲಾಪದ ಸಂದರ್ಭದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ರೀತಿ ಗೈರಾಗುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.