ಬೆಂಗಳೂರು: ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಅಭಿವೃದ್ಧಿಗೆ ಶಿಕ್ಷಣದಲ್ಲಿ ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳುವುದು ಶಿಕ್ಷಣ ತಜ್ಞರು, ಅನುದಾನ ಸಂಸ್ಥೆಗಳು, ನೀತಿ ನಿರೂಪಕರು, ಮಾನವತಾವಾದಿಗಳು ಮತ್ತು ಸಮಾಜದ ಜವಾಬ್ದಾರಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು. ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾನಿಲಯಗಳು ಸಾಮಾಜಿಕ ಸಂಪ್ರದಾಯದ ಸಂಶೋಧನೆಯನ್ನು ಉತ್ತೇಜಿಸುತ್ತವೆ. ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾನವಕುಲಕ್ಕೆ ಹವಾಮಾನ ಬದಲಾವಣೆಯಿಂದ ತಲೆದೋರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತವೆ. ಹಾಗೆಯೇ ಸುಲಭವಾಗಿ ಪ್ರವೇಶಿಸಬಹುದಾದ ಜೀವನಶೈಲಿಯ ಮಾದರಿಗಳ ಬಗ್ಗೆ ಯೋಚಿಸುವ ಅವಶ್ಯಕತೆಯಿದೆ. ವಿಶೇಷವಾಗಿ ಬಡವರ, ಅತ್ಯಂತ ದುರ್ಬಲರ ಹಾಗೂ ಪರಿಸರದ ಕಾಳಜಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪ್ರಸ್ತುತ, ಸ್ವಾವಲಂಬಿ ಮತ್ತು ಬಲಿಷ್ಠ ಭಾರತದ ಬಗ್ಗೆ ಮಾತನಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಡಿಜಿಟಲ್ ಚಟುವಟಿಕೆಗಳನ್ನು ಹೆಚ್ಚು ಹರಡಲು ಬಳಕೆದಾರರಿಗೆ ತಂತ್ರಜ್ಞಾನವನ್ನು ಸರಳ ಮತ್ತು ವೈಶಿಷ್ಟ್ಯಗಳಿಂದ ಸಮೃದ್ಧಗೊಳಿಸುವುದು ಅವಶ್ಯಕ. ಪ್ರತಿಭಾವಂತ ವಿದ್ಯಾರ್ಥಿಗಳು ಆದರ್ಶ ಸಮಾಜದ ರಚನೆಯ ಆಧಾರ ಸ್ತಂಭಗಳು. ವಿದ್ಯಾರ್ಥಿಗಳ ಕೆಲಸ, ನಡವಳಿಕೆ ಮತ್ತು ಆಲೋಚನೆಯನ್ನು ಸಮಾಜದ ಸಿದ್ಧಾಂತ, ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಜೋಡಿಸಬೇಕು. ಹೊಸ ಆಲೋಚನೆಗಳು, ಹೊಸ ಪ್ರಯೋಗಗಳಿಗೆ ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ ವಾತಾವರಣವನ್ನು ಸೃಷ್ಟಿಸುವುದು ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಗೆ ಪ್ರತಿಭಾವಂತ ಯುವ ಪೀಳಿಗೆಯ ಜವಾಬ್ದಾರಿ. ವಿದ್ಯಾರ್ಥಿಗಳು ಸಮಾಜದ ಮತ್ತು ದೇಶದ ಭರವಸೆಯ ಕೇಂದ್ರಬಿಂದು ಎಂದು ಹೇಳಿದರು.
ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯ ಬಹಳ ಪುರಾತನವಾಗಿದೆ. ಪ್ರಾಚೀನ ಕಾಲದಿಂದಲೂ "ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ" ಎಂಬ ಮನೋಭಾವದಿಂದ ಪ್ರೇರಿತವಾದ "ವಸುಧೈವ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸಿ, ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವಶಾಂತಿ, ಸಮಾನತೆ, ಸಾಮರಸ್ಯವನ್ನು ಶಿಕ್ಷಣ ಕಲಿಸುತ್ತದೆ ಎಂದರು.