ಬೆಂಗಳೂರು:ಯೋಗ ಮತ್ತು ಆಯುರ್ವೇದ ವೈದ್ಯ ಪದ್ಧತಿಯ ಮೂಲಕ ತಲಸ್ಸೆಮಿಯಾ ರೋಗವನ್ನು ನಿವಾರಿಸಬಹುದಾಗಿದೆ. ನಮ್ಮ ಪ್ರಾಚೀನ ಪದ್ದತಿಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ಇವೆ ಎಂದು ಅದಮ್ಯ ಚೇತನ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಸೋಮವಾರ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದಲ್ಲಿ ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಪದ್ಧತಿಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ಇವೆ. ಆಲೋಪತಿ ಮೆಡಿಕಲ್ ಕಂಪನಿಗಳ ಮಾಫಿಯಾದ ಕಪಿ ಮುಷ್ಟಿಯಿಂದಾಗಿ ಸಾಮಾನ್ಯ ಜನರನ್ನು ಸಂರಕ್ಷಿಸಲು ಸಂರಕ್ಷಾ ಸಂಸ್ಥೆ ಸಾಕಷ್ಟು ಕಾರ್ಯನಿರ್ವಹಿಸುತ್ತಿದೆ.
ದೇಶದಲ್ಲಿ ಸುಮಾರು 10 ಸಾವಿರ ಮಕ್ಕಳು ತಲಸ್ಸೆಮಿಯಾದಂತಹ ಸಮಸ್ಯೆಗಳೊಂದಿಗೆ ಹುಟ್ಟುತ್ತಾರೆ. ಅದರಲ್ಲಿ 9 ಸಾವಿರ ಮಕ್ಕಳ ರೋಗದ ಚಿಕಿತ್ಸೆ ಪೋಷಣೆಯ ಹೊಣೆ ಹೊತ್ತಿರುವ ಸಂರಕ್ಷಾ ತಲಸ್ಸೆಮಿಯಾ ಮಕ್ಕಳ ಕೇಂದ್ರ ಸರ್ಕಾರದ ರೀತಿಯಲ್ಲಿ ಶ್ರಮಿಸುತ್ತಿದೆ. ಪೀಡಿತರ ಬಾಳನ್ನು ಹಸನುಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಹೀಗಾಯಿತಲ್ಲ ಎಂದು ಕೊರಗುವುದನ್ನು ಬಿಟ್ಟು, ಈ ರೀತಿಯ ಮಕ್ಕಳ ಸೇವೆ ಮಾಡುವ ಅವಕಾಶವನ್ನು ಭಗವಂತ ಒದಗಿಸಿದ್ದಾನೆಂದು ಹೆಮ್ಮೆಪಡಬೇಕು ಎಂದು ಹೇಳಿದರು.
ಸರ್ಕಾರಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ರಾಮಚಂದ್ರ ಶೆಟ್ಟಿ ಮಾತನಾಡಿ, ತಲಸ್ಸೆಮಿಯಾ ಎಂಬುದು ಭಾರಿ ಅಪಾಯದ ಕಾಯಿಲೆಯೇನಲ್ಲ, ದೇಹಕ್ಕೆ ಬೇಕಾದ ಕೆಂಪುರಕ್ತ ಕಣಗಳು ಉತ್ಪತ್ತಿಯಾಗದ್ದರಿಂದ ಈ ಕಾಯಿಲೆಯು ಅಪರೂಪದ ಕಾಯಿಲೆಯಾಗಿದೆ. ಹಾಗಾಗಿ ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ ಐರನ್ ಕಿಲೇಷನ್ ಥೆರಪಿ ಹಾಗೂ ಕೆಲವಾರು ಔಷದೋಪಚಾರಗಳನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.