ಬೆಂಗಳೂರು : ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಟಿ ಜಿ ಶಿವಶಂಕರೇಗೌಡ ಅವರನ್ನು ರಾಜ್ಯ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ಟಿ ಜಿ ಶಿವಶಂಕರೇಗೌಡ ನೇಮಕ
ಹೈಕೋರ್ಟ್ನ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಆಗಿದ್ದ ಟಿ ಜಿ ಶಿವಶಂಕರೇಗೌಡ ಅವರನ್ನು ರಾಜ್ಯ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಹೈಕೋರ್ಟ್ನ ವಿಜಿಲೆನ್ಸ್ ರಿಜಿಸ್ಟ್ರಾರ್ ಎಸ್.ವೈ ವಟವಟಿ ನೋಟಿಫಿಕೇಷನ್ ಹೊರಡಿಸಿದ್ದಾರೆ. ಈ ಹಿಂದಿನ ರಿಜಿಸ್ಟ್ರಾರ್ ಜನರಲ್ ಆಗಿದ್ದ ರಾಜೇಂದ್ರ ಬಾದಾಮಿಕರ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು. ಹೀಗಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹುದ್ದೆ ಖಾಲಿ ಇತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಆಗಿದ್ದ ಟಿ ಜಿ ಶಿವಶಂಕರೇಗೌಡ ಅವರನ್ನು ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ ಮಾಡಲಾಗಿದೆ.
ಕೋವಿಡ್ ಆರಂಭವಾದ ಬಳಿಕ ನ್ಯಾಯಾಲಯಗಳು ಆನ್ಲೈನ್ ನಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ಮೇಲೆ ನ್ಯಾಯಾಲಯಗಳಲ್ಲಿ ವರ್ಚುಯಲ್ ವ್ಯವಸ್ಥೆ ಜಾರಿಗೊಳಿಸುವಲ್ಲಿ ಕಂಪ್ಯೂಟರ್ ರಿಜಿಸ್ಟ್ರಾರ್ ಆಗಿದ್ದ ಟಿ ಜಿ ಶಿವಶಂಕರೇಗೌಡ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವರ್ಚುಯಲ್ ಕೋರ್ಟ್ ವ್ಯವಸ್ಥೆ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ಹೈಕೋರ್ಟ್ ವರ್ಚುಯಲ್ ವ್ಯವಸ್ಥೆ ಕುರಿತು ಸುಪ್ರೀಂಕೋರ್ಟ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು.