ಕರ್ನಾಟಕ

karnataka

ETV Bharat / state

ಪಠ್ಯಪುಸ್ತಕ ಪರಿಷ್ಕರಣೆ ಖಚಿತ, ತಂಡ ರಚನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ - ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮಕ್ಕಳ ಭವಿಷ್ಯ, ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗದಂತೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Minister Madhu Bangarappa meeting with officials
ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಸಭೆ

By

Published : May 30, 2023, 1:33 PM IST

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸಿದ್ದವಿದ್ದು ಮಕ್ಕಳ ಭವಿಷ್ಯ, ಮಕ್ಕಳ ಚಿಂತನೆ, ಮಕ್ಕಳ ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಪಠ್ಯದಲ್ಲಿ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ಬಂದು ಪರಿಷ್ಕರಣೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದೆ. ಅದರಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ, ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ ಎಂದು ಭರವಸೆ ನೀಡಿದ್ದೇವೆ. ಅದರಂತೆ ಮಕ್ಕಳ ಚಿಂತನೆ ಕಲ್ಮಶವಾಗಬಾರದು ವಿದ್ಯಾಭ್ಯಾಸದಲ್ಲಿ ಅಡಚಣೆ ಆಗಬಾರದು. ಹಾಗಾಗಿ ಇದರಲ್ಲಿರುವ ತಪ್ಪುಗಳನ್ನು ಸರ್ಕಾರದ ಕಡೆಯಿಂದ, ನನ್ನ ಕಡೆಯಿಂದ ತೆರವು ಮಾಡುವ ಕೆಲಸ ಮಾಡುತ್ತೇವೆ.

ಈ ಸಂಬಂಧ ಈಗಾಗಲೇ ಸಿಎಂ ನಿರ್ದೇಶನದಂತೆ ನಾನೇ ಒಂದು ತಂಡವನ್ನು ರಚಿಸಿಕೊಳ್ಳುತ್ತಿದ್ದೇನೆ. ಇನ್ನೆರಡು ದಿನಗಳಲ್ಲಿ ತಂಡ ರಚನೆಯಾಗಲಿದೆ ಒಂದನೇ ತಾರೀಕು ಸಚಿವ ಸಂಪುಟ ಸಭೆ ಇದೆ. ಅಂದು ಇದರ ಬಗ್ಗೆ ಒಂದು ಚಿತ್ರಣ ಸಿಗಲಿದೆ. ಪಠ್ಯಪುಸ್ತಕದಲ್ಲಿನ ಎಲ್ಲವನ್ನು ಕೂಡ ಪರಿಶೀಲನೆ ಮಾಡಿ ಮಕ್ಕಳ ಭವಿಷ್ಯಕ್ಕೆ, ಮಕ್ಕಳ ಚಿಂತನೆಗೆ, ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬದಲಾವಣೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಹಿಜಾಬ್ ವಿಚಾರದಲ್ಲಿ ಕಾನೂನುಬದ್ಧ ಹೋರಾಟ ಮುಂದುವರೆಯಲಿದೆ. ಇದು ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚು ಹೇಳುವುದಿಲ್ಲ, ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಏನೇ ಹೋರಾಟ ಮಾಡಿದರೂ ಕಾನೂನು ಬದ್ಧವಾಗಿ ಮಾಡಲಾಗುತ್ತದೆ. ಅದರ ಬಗ್ಗೆ ಹೆಚ್ಚು ಹೇಳುವುದಿಲ್ಲ ಎಂದು ತಿಳಿಸಿದರು.

ನನಗೆ ಇನ್ನು ಎರಡು ಮೂರು ತಿಂಗಳು ಸಮಯ ಈ ಇಲಾಖೆಯಲ್ಲಿ ಅಧ್ಯಯನ ಮಾಡಲು ಬೇಕಾಗಿದೆ. ಇದು ಮಕ್ಕಳದ ಭವಿಷ್ಯದ ವಿಚಾರ ಹಾಗಾಗಿ ಬಹಳ ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ಮಾಡಬೇಕಾಗಿದೆ. ಹಾಗಾಗಿ ಏನೇ ನಿರ್ಧಾರ ಮಾಡಿದರೂ ಅಧ್ಯಯನ ಮಾಡಿ ಯೋಚಿಸಿ, ಚರ್ಚಿಸಿಯೇ ನಿರ್ಧಾರ ಮಾಡುತ್ತೇವೆ. ಆತುರದ ನಿರ್ಧಾರಕ್ಕೆ ಮುಂದಾಗಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲೆಗಳ ಆರಂಭಕ್ಕೆ ಎಲ್ಲ ವ್ಯವಸ್ಥೆ ಸಿದ್ಧವಿದೆ. ಮಕ್ಕಳನ್ನು ಸ್ವಾಗತ ಮಾಡಲು ನಮ್ಮ ಆಡಳಿತ ವರ್ಗ ಮತ್ತು ನಾವು, ಶಾಲಾ ಶಿಕ್ಷಕರು, ಎಲ್ಲರೂ ಸಿದ್ಧರಿದ್ದಾರೆ. ಮಕ್ಕಳಿಗೆಲ್ಲ ಶುಭ ಕೋರುತ್ತೇನೆ. ಬಹಳ ಸಂತೋಷದಿಂದ ಶಾಲೆಗಳಿಗೆ ಹೋಗಿ ಪಾಠಗಳನ್ನು ಕೇಳುವಂತೆ ಮನವಿ ಮಾಡುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಧಿಕಾರಿ ವರ್ಗದವರ ಜೊತೆ ಸಭೆ ನಡೆಸಿದ್ದೇನೆ. ಎಲ್ಲವೂ ಸರಿ ಇದೆ. ಕೆಲವು ತ್ವರಿತ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಇಂದು ಅಥವಾ ನಾಳೆ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಮಹಿಳೆಯರಿಗೆ ಉಚಿತ ಸಾರಿಗೆ: ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ

ABOUT THE AUTHOR

...view details