ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಹಿಂದೆ ಸರಿದಿದೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡುತ್ತಿವೆ. ಇನ್ನು ದಿನೇ ದಿನೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳ ಪಠ್ಯಪುಸ್ತಕದಲ್ಲಿ ಕಡಿತ ಮಾಡಲಾಗಿದೆ. ಶೇ.30 ರಷ್ಟು ಪಠ್ಯಕ್ರಮವನ್ನ ಈ ವರ್ಷದ ಶೈಕ್ಷಣಿಕ ಸಾಲಿಗೆ ಕಡಿತ ಮಾಡಲಾಗಿದೆ. ಇತ್ತ ಪಠ್ಯಪುಸ್ತಕ ಕಡಿತ ಪ್ರಾಮಾಣಿಕವಾಗಿ ಆಗಿಲ್ಲವೆಂದು ಕ್ಯಾಮ್ಸ್ ಆರೋಪಿಸಿದೆ.
ಬಹುತೇಕ ಪಾಠಗಳಿದ್ದು ಅದರಲ್ಲಿ ಅವಧಿಯ ಸಂಖ್ಯೆ ಕಡಿಮೆ ಮಾಡಿದ್ದು ಕಾಣುತ್ತಿದೆ. ಟಿಪ್ಪು ಸುಲ್ತಾನ್, ಹೈದರಾಲಿಗೆ ಸಂಬಂಧಪಟ್ಟಂತೆ ಇರುವ ಪಾಠಗಳನ್ನು ತೆಗೆದುಹಾಕಲಾಗಿದೆ. ಬಹಳ ಬುದ್ಧಿವಂತಿಕೆಯಿಂದ ಇಡೀ ಪ್ರಪಂಚಕ್ಕೆ ಖ್ಯಾತಿ ಆದ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನ ಪಿಪಿಟಿ ಮಾದರಿಯಲ್ಲಿ ತೋರಿಸುವಂತೆ ಹೇಳಿದ್ದಾರೆ. ಇದು ಅರ್ಥಹೀನವಾಗಿದ್ದು, ಎಲ್ಲೋ ಒಂದು ಕಡೆ ಟಿಪ್ಪು ಪಾಠವನ್ನ ದುರ್ಬಲಗೊಳಿಲಾಗಿದೆ ಅಂತ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಟಿಪ್ಪುಸುಲ್ತಾನ್ ಇತಿಹಾಸವನ್ನ ಕಲಿಯದಂತೆ ಮಾಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಡಿತ ಪಠ್ಯದಲ್ಲಿಟ್ಟು ಪಿಪಿಟಿ ಮೂಲಕ ತೋರಿಸುವಂತೆ ಸಲಹೆ ನೀಡಿರುವುದು ಒಳ್ಳೆಯದಲ್ಲ. ಪ್ರಮುಖ ವಿಷಯಗಳನ್ನ ಕಡಿತದ ಹೆಸರಲ್ಲಿ ಮಾಡಿರುವುದನ್ನು ಒಪ್ಪುವುದಲ್ಲ ಎಂದು ತಿಳಿಸಿದ್ದಾರೆ.