ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿ ತಡವಾಗಿ ಬಂದಿದ್ದಕ್ಕೆ ಸನ್ಮಾನ ಬೇಡವೆಂದ ಟೆನ್ನಿಸ್ ದಿಗ್ಗಜ; ಇನ್ನೆರಡು ದಿನದಲ್ಲಿ ಕಾರ್ಯಕ್ರಮ - ತಡವಾಗಿ ಬಂದ ಸಿಎಂ

ವಿಶ್ವ ಟೆನಿಸ್ ದಂತಕಥೆ ಬ್ಯೋನ್ ಬೋರ್ಗ್ ಅವರು ನಿನ್ನೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದರೆಂದು ಸನ್ಮಾನ ತಿರಸ್ಕರಿಸಿದ್ದರು.

Tennis legend Bjorn Borg
ಟೆನಿಸ್ ಲೋಕದ ದಿಗ್ಗಜ ಬ್ಯೋನ್ ಬೋರ್ಗ್

By

Published : Feb 22, 2023, 8:42 PM IST

ಬೆಂಗಳೂರು: ನಿನ್ನೆ(ಮಂಗಳವಾರ) ನಗರದಲ್ಲಿ ನಡೆದ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡವಾಗಿ ಆಗಮಿಸಿದ್ದರಿಂದ ಬೇಸರಗೊಂಡ ಜಾಗತಿಕ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರು ಸನ್ಮಾನ ತಿರಸ್ಕರಿಸಿದ್ದರು. ಹೀಗಾಗಿ, ನಾಳೆ ಅಥವಾ ನಾಡಿದ್ದು ಬೋರ್ಗ್ ಹಾಗೂ ಮಾಜಿ ಟೆನ್ನಿಸ್ ಆಟಗಾರ ವಿಜಯ್ ಅಮೃತರಾಜ್ ಅವರನ್ನು ಕರೆಸಿ ಸನ್ಮಾನಿಸುವ ಸಾಧ್ಯತೆಯಿದೆ.

ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆಯ ಕೋರ್ಟ್‌ನಲ್ಲಿ ಬೆಂಗಳೂರು ಓಪನ್ ಟೆನಿಸ್ ಟೂರ್ನಿ ನಡೆಯುತ್ತಿದೆ. 11 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ವೀಡನ್ ಮೂಲದ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರ ಪುತ್ರ ಲಿಯೋ ಬೋರ್ಗ್ ಈ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಅವರು ಮಗನ ಆಟ ನೋಡಲು ನಗರಕ್ಕೆ ಬಂದಿದ್ದರು‌.

ನಿನ್ನೆ ಕೆಎಸ್ಎಲ್‌ಟಿಎ‌ಯಲ್ಲಿ ಭಾರತದ ಮಾಜಿ ಆಟಗಾರ ವಿಜಯ್ ಅಮೃತರಾಜ್ ಹಾಗೂ ಬೋರ್ಗ್ ಅವರನ್ನು ಸಿಎಂ ಬೊಮ್ಮಾಯಿ ಸನ್ಮಾನಿಸುವ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿತ್ತು‌‌. ಸಿಎಂ ಅವರ ದಿನಚರಿ ಕಾರ್ಯಕ್ರಮ 10.30ಕ್ಕೆ ನಿಗದಿಯಾಗಿತ್ತು‌. ಆದರೆ ಅವರು ಬಂದಿದ್ದು 11.30ಕ್ಕೆ. ಅಷ್ಟೊತ್ತಿಗಾಗಲೇ ಮಗನ ಮ್ಯಾಚ್ ಶುರುವಾಗಿದ್ದು ಗ್ಯಾಲರಿಯಲ್ಲಿ ಕುಳಿತು ಬೋರ್ಗ್ ವೀಕ್ಷಿಸುತ್ತಿದ್ದರು. ಸಿಎಂ ಬಂದಿರುವ ಬಗ್ಗೆ ಬೋರ್ಗ್ ಅವರ ಗಮನಕ್ಕೆ ತರಲಾಯಿತು. ಪಂದ್ಯ ಮುಗಿದ ಬಳಿಕ ಬರುವುದಾಗಿ ಬೋರ್ಗ್ ಹೇಳಿದ್ದರು. ಇದರಿಂದ ಆಯೋಜಕರು ಸಮಾರಂಭ ರದ್ದುಗೊಳಿಸಬೇಕಾಯಿತು.

ಬೇರೆ ಕಾರ್ಯಕ್ರಮ ಇದ್ದುದರಿಂದ ಸಿಎಂ ತಡವಾಗಿ ಬಂದಿರುವುದಾಗಿ ಆಯೋಜಕರೊಬ್ಬರು ಬೋರ್ಗ್ ಅವರ ಗಮನಕ್ಕೆ ತಂದಿದ್ದಾರೆ. ಬೋರ್ಗ್‌ ಅವರು ಮಗನ ಪಂದ್ಯ ವೀಕ್ಷಣೆ ಮೊಟಕುಗೊಳಿಸಿ ಬರುವುದಿಲ್ಲ ಎಂಬ ವಿಚಾರವನ್ನು ಸಿಎಂ ಗಮನಕ್ಕೆ ತರಲಾಯಿತು‌. ಪರಿಸ್ಥಿತಿಯನ್ನು ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಿದ ಸಿಎಂ ಕೆಲ ನಿಮಿಷಗಳ ಕಾಲ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿ ತೆರಳಿದ್ದರು.

ಹೀಗಾಗಿ, ನಿನ್ನೆ ನಡೆಯಬೇಕಿದ್ದ ಸನ್ಮಾನ ಕಾರ್ಯಕ್ರಮ ರದ್ದುಗೊಂಡಿದ್ದು ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಕಚೇರಿಗೆ ಬೋರ್ಗ್ ಹಾಗೂ ವಿಜಯ್ ಅಮೃತರಾಜ್ ಅವರನ್ನು ಕರೆಸಿಕೊಂಡು ಅವರನ್ನು ಬೊಮ್ಮಾಯಿ ಸನ್ಮಾನಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಬೋರ್ಗ್​ ಪುತ್ರನಿಗೆ ಸೋಲು: ಇನ್ನು ಪಂದ್ಯದಲ್ಲಿ, ಬ್ಯೋನ್ ಬೋರ್ಗ್ ಅವರ ಪುತ್ರ ಲಿಯೋ ಬೋರ್ಗ್ ಅವರು 6-2, 6-3 ಅಂಕಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಬ್ಯೋನ್ ಬೋರ್ಗ್ ಅವರು ಮಾಜಿ ಭಾರತೀಯ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡರು. ಆ ವೇಳೆ ಅವರು KSLTA ಯ ಹಾಲ್ ಆಫ್ ಫೇಮ್‌ನಲ್ಲಿ ತಮ್ಮ ಛಾಯಾಚಿತ್ರಕ್ಕೆ ಸಹಿ ಹಾಕಿದರು.

ಬೋರ್ಗ್ ಸಾಧನೆ: ಬ್ಯೋನ್ ಬೋರ್ಗ್ ಅವರು ಸ್ವೀಡನ್ ಮೂಲದ ಟೆನಿಸ್ ಆಟಗಾರ. ವಿಶ್ವದ ನಂ. 1 ಶ್ರೇಯಾಂಕ ಪಡೆದಿದ್ದರು. 1974ರಿಂದ 1981 ರೊಳಗೆ 11 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಓಪನ್ ಟೆನಿಸ್ ಯುಗದಲ್ಲಿ ಈ ಸಾಧನೆ ಮಾಡಿದ ಮೊದಲ ಪುರುಷ ಆಟಗಾರ ಎಂದೆನಿಸಿಕೊಂಡಿದ್ದರು. ಫ್ರೆಂಚ್ ಓಪನ್‌ನಲ್ಲಿ ಆರು ಪ್ರಶಸ್ತಿ ಮತ್ತು ವಿಂಬಲ್ಡನ್‌ ಟೆನಿಸ್‌ನಲ್ಲಿ ಸತತ ಐದು ಪ್ರಶಸ್ತಿಗಳನ್ನು ಗೆದ್ದು, ವಿಶ್ವವಿಖ್ಯಾತರಾಗಿದ್ದರು.

ಇದನ್ನೂಓದಿ:ದುಬೈ ಟೂರ್ನಿ: ಸೋಲಿನೊಂದಿಗೆ ವೃತ್ತಿಪರ ಟೆನಿಸ್​ಗೆ ಸಾನಿಯಾ ಮಿರ್ಜಾ ಗುಡ್​ಬೈ

ABOUT THE AUTHOR

...view details