ಬೆಂಗಳೂರು: ಭಯೋತ್ಪಾದಕ ಕೃತ್ಯಕ್ಕೆ ಸಂಚು ಮತ್ತು ರಾಷ್ಟ್ರಧ್ವಜ ಸುಟ್ಟ ಆರೋಪ ಹೊತ್ತು ವಿಚಾರಣೆಗೆ ಪೊಲೀಸರ ವಶಕ್ಕೆ ಪಡೆದ ಅಂಶ ಗೊತ್ತಿದ್ದರೂ ಮಗನನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸರಿಗೆ ಸೂಚಿಸಲು ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಮಂಗಳೂರು ಮೂಲದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುನೀರ್ ಅಹ್ಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ದಂಡ ವಿಧಿಸಿ ಆದೇಶಿಸಿದೆ. ವಿಚಾರಣೆ ವೇಳೆ ಒಂದು ಲಕ್ಷ ರೂ. ದಂಡ ವಿಧಿಸಲು ನ್ಯಾಯಪೀಠ ಮುಂದಾಗಿತ್ತು. ಆದರೆ, ಅರ್ಜಿದಾರರ ಮನವಿಯ ಮೇರೆಗೆ ಮೊತ್ತವನ್ನು 10 ಸಾವಿರಕ್ಕೆ ಇಳಿಸಿತು. ಆ ಮೊತ್ತವನ್ನು ಹೈಕೋರ್ಟ್ ವಕೀಲರ ಗುಮಾಸ್ತರ ಸಂಘಕ್ಕೆ ನೀಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ಅರ್ಜಿ ವಜಾಗೊಳಿಸಿತು.
ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲ ಪಿ.ತೇಜೇಶ್ ಮೆಮೊ ಸಲ್ಲಿಸಿ, ಅರ್ಜಿದಾರನ ಪುತ್ರನ ಕಾಣೆ ಸಂಬಂಧ ಮಂಗಳೂರು ಪೂರ್ವ ಠಾಣೆ ಪೊಲೀಸರು 2022ರ ಸಪ್ಟೆಂಬರ್ 19ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ತೀರ್ಥಹಳ್ಳಿ ಠಾಣಾ ಪೊಲೀಸರು ಅರ್ಜಿದಾರನ ಪುತ್ರನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು.
ಬಳಿಕ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಪ್ಟೆಂಬರ್ 20ರ ಮಧ್ಯರಾತ್ರಿ 12:30ಕ್ಕೆ ಬಂಧಿಸಿದ್ದರು. ಬೆಳಗ್ಗೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿ ಎಫ್‌ಐಆರ್ ಅನ್ನು ಕೋರ್ಟ್‌ಗೆ ಸಲ್ಲಿಸಿದರು.