ಬೆಂಗಳೂರು:ವಿಧಾನಸಭೆ ಉಪ ಸಭಾಧ್ಯಕ್ಷರ ಮೇಲೆ ಪೇಪರ್ ತೂರುವುದು ತಪ್ಪಲ್ಲವೇ? ಇಂತಹ ವರ್ತನೆಗೆ ಕ್ರಮ ಕೈಗೊಳ್ಳಬಾರದೇ ಎಂದು ಅನುಚಿತ ವರ್ತನೆ ಆರೋಪದ ಮೇಲೆ ಬಿಜೆಪಿಯ 10 ಶಾಸಕರ ಅಮಾನತು ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವಿಧಾನಸೌಧದ ಲಾಂಜ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಚರ್ಚೆ ಮಾಡಲು ಧರಣಿ ಮಾಡಲು ಅವಕಾಶ ಇದೆ. ಆದರೆ, ಕಾಗದ ಪತ್ರ ಹರಿದು ಮುಖದ ಮೇಲೆ ಎಸೆದಿದ್ದಾರೆ. ಡೆಪ್ಯೂಟಿ ಸ್ಪೀಕರ್ ದಲಿತ ಸಮುದಾಯದವರು ಅವರ ಮುಖಕ್ಕೆ ಎಸೆದಿದ್ದಾರೆ. ಇದು ತಪ್ಪಲ್ಲವಾ? ಸ್ಪೀಕರ್ ಇವರು ಹೇಳಿದಂತೆ ಕೇಳಿದರೆ ಒಳ್ಳೆಯವರು, ಇಲ್ಲ ಅಂದರೆ ಸರ್ಕಾರದ ಕೈಗೊಂಬೆನಾ?'' ಎಂದು ಪ್ರಶ್ನಿಸಿದರು. ಶಾಸಕ ಬಸನಗೌಡ ಯತ್ನಾಳ್ಗೆ ಪೆಟ್ಟು ಬಿದ್ದಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರ ಕಡೆಯವರೇ ತಳ್ಳಿರಬೇಕು ಎಂದರು.
ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ''ಅಮಾನತು ಯಾಕೆ ಆಗಿದ್ದಾರೆ ಎಂದು ಅವರು ಮನವರಿಕೆಮಾಡಿಕೊಳ್ಳಲಿ. ಉಪಸಭಾಧ್ಯಕ್ಷರ ಮೇಲೆ ಪೇಪರ್ ಹರಿದು ಎಸೆದ್ದಿದ್ದರಾರೆ. ಬಿಜೆಪಿಯವರು ಹತಾಶರಾಗಿದ್ದಾರೆ. ನಮ್ಮ ಉಪ ಸಭಾಧ್ಯಕ್ಷರು ದಲಿತರು, ಶೋಷಣೆಗೆ ಒಳಗಾದವರು. ಈ ಸಮಾಜದವರು ಮುಂದಾಳತ್ವಕ್ಕೆ ಬರುತ್ತಿದ್ದಾರೆ ಎಂದು ಬಿಜೆಪಿಯವರಿಗೆ ಕೋಪ ಹಾಗಾಗಿ ಪ್ರತಿಭಟನೆ ಮಾಡಿದ್ದಾರೆ. ಮುಂದೆ ಜನ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಹರಿದು ಹಾಕಿದ್ದಕ್ಕೆ ಅಮಾನತು ಮಾಡಿದ್ದಾರೆ. ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಎಸೆದು ಬಿಜೆಪಿಯವರು ಜಾತಿ ನಿಂದನೆ ಮಾಡಿದ್ದಾರೆ. ನಪುಂಸಕ ಪಕ್ಷ ಇವತ್ತು ವಿರೋಧ ಪಕ್ಷ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವದ ಕಗ್ಗೊಲೆ- ಆರೋಪ:ಶಾಸಕ ನಾರಾಯಣ ಸ್ವಾಮಿ ಮಾತಮಾಡಿ, ''ಬಿಜೆಪಿ ಬಣ್ಣ ಬಯಲಾಗಿದೆ ಬಿಜೆಪಿ ಪಕ್ಷದವರು ಈ ಹಿಂದೆ ಮಾಡಿರುವ ದಲಿತರ ಮೇಲೆ ದಬ್ಬಾಳಿಕೆಯನ್ನು ಸಹಸಿಕೊಂಡಿದ್ದೇವೆ. ಇಂದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಅಭಿವೃದ್ಧಿಗಳ ಚರ್ಚೆ ಮಾಡಿಲ್ಲ. ಸವಲತ್ತುಗಳು ಕಡಿಮೆ ಆಗಿದ್ದರೆ, ವಿರೋಧ ಪಕ್ಷಗಳು ಸಲಹೆ ನೀಡಲಿ. ನಾವು ಕೂಡ ವಿರೋಧ ಪಕ್ಷದಲ್ಲಿ ಇದ್ದೆವು. ಆದರೆ, ಈ ರೀತಿ ನಾವು ಮಾಡಿಲ್ಲ ಹಿಂದೆ ಇದ್ದ ಸ್ಪೀಕರ್ ನೇರವಾಗಿ ಆರ್ಆರ್ಎಸ್ ಎಂದು ಹೇಳಿದ್ದರು. ಆವಾಗಲೂ ಕೂಡ ನಾವು ಸುಮ್ಮನಿದ್ದೆವು, ಸಿದ್ದರಾಮಯ್ಯ ಒಳ್ಳೆ ಬಜೆಟ್ ಕೊಟ್ಟಿದ್ದಾರೆ. ಹತಾಶಾರಾದ ಬಿಜೆಪಿಯವರು ಸುಳ್ಳಿನ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಒಬ್ಬ ದಲಿತ ನಾಯಕನ್ನ ಮೊದಲ ಬಾರಿಗೆ ಕಾಂಗ್ರೆಸ್ ಆಯ್ಕೆ ಮಾಡಿದೆ. ಆ ಸ್ಥಾನಕ್ಕೆ ಇಂದು ಬಿಜೆಪಿಯವರು ಅವಮಾನ ಮಾಡಿದ್ದಾರೆ ಇದನ್ನು ನಾನು ಖಂಡಿಸುತ್ತೇನೆ'' ಎಂದರು.