ಬೆಂಗಳೂರು:ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ಬಳಿಕ ಸದ್ಯ ತಣ್ಣಗಾದಂತೆ ಕಾಣುತ್ತಿದೆ. ನಾಯಕತ್ವ ಬದಲಾವಣೆಯ ಟೆನ್ಷನ್‌ನಲ್ಲಿದ್ದ ಸಿಎಂ ಯಡಿಯೂರಪ್ಪ ಉಸ್ತುವಾರಿ ಭೇಟಿ ಬಳಿಕ ಸ್ವಲ್ಪ ನಿರಾಳರಾಗಿದ್ದಂತೆ ಕಂಡು ಬಂದರೂ, ಈಗಲೂ ನಾಯಕತ್ವದ ಗೊಂದಲ ಮುಂದುವರಿದಿದೆ.
ಹೈ ಕಮಾಂಡ್ ರಾಜ್ಯದಲ್ಲಿ ಪದೇ ಪದೆ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಕೂಗು, ಪಕ್ಷದೊಳಗಿನ ಬೇಗುದಿ ಏನೆಂಬುದನ್ನು ಅರಿಯಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ರಾಜ್ಯ ಪ್ರವಾಸ ನಡೆಸಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯಲು ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಸಿಗುತ್ತಿಲ್ಲ.
ಒಬ್ಬ ಉಸ್ತುವಾರಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಸಲಹೆ ಸೂಚನೆಗಳನ್ನು ಕೊಟ್ಟು ವಾಪಸ್ಸಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಅವರ ಮೂರು ದಿನ ಭೇಟಿಯಿಂದ ಕೆಲ ಅತೃಪ್ತರು, ಬಂಡಾಯ ನಾಯಕರು, ಸಚಿವರುಗಳ ಜೊತೆ ಸಭೆ ನಡೆಸಿ ನಾಯಕತ್ವ ವಿಚಾರವಾಗಿ ಎದ್ದಿದ್ದ ಅಸಮಾಧಾನ, ಗೊಂದಲಕ್ಕೆ ಸದ್ಯ ತೆರೆ ಎಳೆದಂತೆ ಕಾಣುತ್ತಿದೆ.
ನಾಯಕತ್ವ ಬದಲಾವಣೆಯ ಬಂಡಾಯದ ಕೂಗಿಗೆ ಹೈ ಕಮಾಂಡ್ ಅಲ್ಪ ವಿರಾಮ ಹಾಕಿದೆಯಾ ಅಥವಾ ಪೂರ್ಣ ವಿರಾಮ ಹಾಕಿದೆಯಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕಂತೂ ಬಂಡಾಯ ಕಹಳೆ ಊದಿದವರಿಗೆ ಹೈ ಕಮಾಂಡ್ ಒಂದು ಸಂದೇಶವನ್ನು ರವಾನೆ ಮಾಡಿದೆ. ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೊಟ್ಟು ಹೋಗಿದೆ. ಆದರೆ ಅರುಣ್ ಸಿಂಗ್ ರಾಜ್ಯ ಪ್ರವಾಸ ಬಂಡಾಯ ಬಣದ ಜೊತೆಗೆ ಸಿಎಂ ಯಡಿಯೂರಪ್ಪಗೂ ಪರೋಕ್ಷವಾಗಿ ಸಂದೇಶ ರವಾನಿಸಲಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.
ನಾಯಕತ್ವ ಅದಲು-ಬದಲುಗೆ ಅಲ್ಪವಿರಾಮವಷ್ಟೇ:ರಾಜ್ಯ ಉಸ್ತುವಾರಿಯಾಗಿ ಪಕ್ಷದ ಆಂತರಿಕ ಕಲಹಕ್ಕೆ ಅರುಣ್ ಸಿಂಗ್ ಅಲ್ಪ ವಿರಾಮ ಹಾಕುವಲ್ಲಿ ಸಫಲವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿರುವ ನಾಯಕತ್ವದ ಕಿಚ್ಚು ಮುಂದಿನ ದಿನಗಳಲ್ಲಿ ಮತ್ತೆ ಸದ್ದು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಅಂದುಕೊಂಡೇ ಅರುಣ್ ಸಿಂಗ್ ಒಬ್ಬೊಬ್ಬರಾಗಿ ಶಾಸಕರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ಶಾಸಕರ ಮನಸ್ಥಿತಿ, ನಾಯಕತ್ವದ ಬಗ್ಗೆ ಅವರ ಅಭಿಪ್ರಾಯ, ಸಿಎಂ ಕಾರ್ಯವೈಖರಿ ಬಗೆಗಿನ ನಿಲುವು, ಸಿಎಂ ಪುತ್ರ ಹಸ್ತಕ್ಷೇಪ ಕುರಿತಾದ ಒಂದು ಚಿತ್ರಣವನ್ನು ಅವಲೋಕಿಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದಿಂದ ಪಕ್ಷಕ್ಕೆ ಆಗುತ್ತಿರುವ ನಷ್ಟದ ಬಗ್ಗೆನೂ ಪರಾಮರ್ಶೆ ನಡೆಸಿದ್ದಾರೆ.