ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಜೂನ್ 14ರಿಂದ 25ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೆ ವಿದ್ಯಾರ್ಥಿಗಳಿಂದ ಆಕ್ಷೇಪಣೆ ಸಲ್ಲಿಸಲು ಇಂದು ಕಡೆಯ ದಿನವಾಗಿದೆ. 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿತ ಸಮಯದೊಳಗೆ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶೇ. 30ರಷ್ಟು ಪಠ್ಯವಸ್ತುವನ್ನ ಕಡಿತ ಮಾಡಲಾಗಿದೆ. ಇದು ಕೇವಲ ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದ್ದು, 2021-22ರ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮದಲ್ಲಿ ಯಾವುದೇ ಕಡಿತವಿರಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಜನವರಿಯಿಂದ ಎಸ್ಎಸ್ಎಲ್ಸಿ ತರಗತಿಗಳು ಆರಂಭವಾಗಿವೆ. ಶೇ. 70ರಷ್ಟು ಪಠ್ಯಕ್ರಮಗಳನ್ನ ಮುಗಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಮುಖ್ಯವಾಗಿ ಸರ್ಕಾರಿ ಶಾಲಾ ಮಕ್ಕಳು ಆನ್ಲೈನ್ ಕ್ಲಾಸ್ನಿಂದಲೂ ವಂಚಿತರಾಗಿರುವುದರಿಂದ ಪೂರ್ಣಾವಧಿ ತರಗತಿಯಲ್ಲೇ ಅಭ್ಯಾಸ ಮಾಡಬೇಕಾದ ಪರಿಸ್ಥಿತಿಯಿದೆ. ಅಂತಹ ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು ಎಂದು ಕ್ಯಾಮ್ಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.