ಬೆಂಗಳೂರು:ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮತ್ತೆ ಚುರುಕುಗೊಳಿಸಿದ್ದಾರೆ. ನಿನ್ನೆ ಇಬ್ಬರು ಎಸಿಪಿಗಳನ್ನ ವಿಚಾರಣೆಗೊಳಪಡಿಸಿದ ಸಿಬಿಐ ತಂಡ, ಹಲವಾರು ಮಾಹಿತಿಯನ್ನ ಕಲೆ ಹಾಕಿದೆ.
ಕದ್ದಾಲಿಕೆ ಪ್ರಕರಣದಲ್ಲಿ ಎಸಿಪಿ ರಾಮಚಂದ್ರ ಅವರ ಪಾತ್ರ ಬಹಳ ಪ್ರಮುಖವಾಗಿರುವ ಕಾರಣ ಅವರನ್ನ ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಹೀಗಾಗಿ ಇಂದು ರಾಮಚಂದ್ರ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಸಿಬಿಐ ಕಚೇರಿಗೆ ತೆರಳುತ್ತಿರುವ ಎಸಿಪಿ ರಾಮಚಂದ್ರ.. ಎಸಿಪಿ ರಾಮಚಂದ್ರ ಅವರ ಪಾತ್ರವೇನು: ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಎಸಿಪಿಯಾಗಿದ್ದ ವೇಳೆ ರಾಮಚಂದ್ರ ಅವರು ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಸ್ವಾಮೀಜಿಗಳು ಹಾಗೂ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಿದ್ದಾರೆ. ಆದರೆ, ಈ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಾಗ್ತಿದ್ದ ಹಾಗೆ ಎಸಿಪಿ ರಾಮಚಂದ್ರ ಅವರು ಸಾಕ್ಷಿಗಳ ನಾಶ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಹಿರಿಯ ಅಧಿಕಾರಿ ಸೂಚನೆ ಮೇರೆಗೆ ಎಸಿಪಿ ಫೋನ್ ಟ್ಯಾಪ್ ಮಾಡಲೆಂದೇ ಎರಡು ಮೊಬೈಲ್ ಮತ್ತು ಸಿಮ್ ಖರೀದಿ ಮಾಡಿ ಎರಡೂ ಮೊಬೈಲ್ಗಳಿಂದ ಯಾವುದೆಲ್ಲ ಮೊಬೈಲ್ ಟ್ಯಾಪ್ ಮಾಡಬೇಕೆಂದು ಮನೆಯಲ್ಲೇ ಇದ್ದುಕೊಂಡು ಫೋನ್ ಕದ್ದಾಲಿಕೆ ಮಾಡುತ್ತಿದ್ದರು. ಈ ವಿಚಾರ ತಿಳಿದ ಸಿಬಿಐ, ಎಸಿಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದಾಗ ರಾಮಚಂದ್ರ ಅವರು ಫೊನ್ ಟ್ಯಾಪ್ ಮಾಡಲೆಂದು ಇಟ್ಟುಕೊಂಡಿದ್ದ ಎರಡು ಮೊಬೈಲ್ ಹಾಗೂ ಸಿಮ್ಗಳನ್ನು ಕಲ್ಲಿನಿಂದ ಜಜ್ಜಿ ಬಿಸಾಕಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.