ಬೆಂಗಳೂರು:ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರು ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿರುವುದು ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಕೆಸಿಆರ್-ಹೆಚ್ಡಿಡಿ ಭೇಟಿ - ತೆಲಂಗಾಣ ಸಿಎಂ ಚಂದ್ರಶೇಖರರಾವ್ ಮತ್ತು ದೇವೇಗೌಡ ಭೇಟಿ
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿರುವ ತೆಲಂಗಾಣ ಸಿಎಂ ಕೆಸಿಆರ್, ಪ್ರಸಕ್ತ ರಾಜಕಾರಣ, ರಾಷ್ಟ್ರಪತಿ ಚುನಾವಣೆ ಹಾಗೂ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ನಿಗದಿತ ಸಮಯಕ್ಕಿಂತ ತೆಲಂಗಾಣ ಸಿಎಂ ಚಂದ್ರಶೇಖರರಾವ್ ಒಂದು ಗಂಟೆ ತಡವಾಗಿ ಆಗಮಿಸಿದರು. ಮನೆಯಿಂದ ಹೊರಬಂದ ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹೂ ಗುಚ್ಛ ನೀಡಿ ಸಿಎಂ ಚಂದ್ರಶೇಖರ ರಾವ್ ಅವರನ್ನು ಸ್ವಾಗತಿಸಿದರು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸುವ ಸಂಬಂಧ ಚಂದ್ರಶೇಖರರಾವ್ ಅವರು ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಭೇಟಿ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಸಂಬಂಧ ಮಾತುಕತೆ ಸೇರಿದಂತೆ ಪ್ರಸಕ್ತ ರಾಜಕಾರಣ, ರಾಷ್ಟ್ರಪತಿ ಚುನಾವಣೆ ಹಾಗೂ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.