ಬೆಂಗಳೂರು: ನಾಪತ್ತೆಯಾಗಿದ್ದ ಟೆಕ್ಕಿ ಅಜಿತಾಬ್ ಎಲ್ಲಿದ್ದಾನೆ ಅನ್ನೋದನ್ನು ಸಿಬಿಐ ಇನ್ನೂ ಪತ್ತೆ ಮಾಡದೆ ಇರುವ ಹಿನ್ನೆಲೆ ಪ್ರಕರಣ ನಿಗೂಢವಾಗಿಯೇ ಉಳಿದಿದೆ. ಮೂರು ವರ್ಷದ ಹಿಂದೆ ಕಾಣೆಯಾಗಿದ್ದರೂ ಇನ್ನೂ ಕೂಡ ಮಗ ದೊರಕದಿರುವ ಹಿನ್ನೆಲೆ ಆತನ ಪೋಷಕರು ಕಂಗಾಲಾಗಿದ್ದಾರೆ.
ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ : ಮೂರು ವರ್ಷದ ಹಿಂದಿನ ಕೇಸ್ ಗೆ ಇನ್ನೂ ನಿಗೂಢ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅಜಿತಾಬ್ ನಾಪತ್ತೆಯಾಗಿ ಮೂರು ವರ್ಷವೇ ಕಳೆದಿದ್ದರೂ ಪ್ರಕರಣದ ಜವಾಬ್ದಾರಿ ಹೊತ್ತಿರುವ ಸಿಬಿಐ ಕಡೆಯಿಂದ ಆತನ ಬಗ್ಗೆ ಒಂದೇ ಒಂದು ಕ್ಲ್ಯೂ ಕೂಡ ಸಿಕ್ಕಿಲ್ಲ.
ವೈಟ್ ಫೀಲ್ಡ್ ನಲ್ಲಿ ನೆಲೆಸಿದ್ದ ಅಜಿತಾಬ್ ಎಂಎನ್ಸಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. 2017ರ ಡಿಸೆಂಬರ್ 18 ರಂದು ತನ್ನ ಕಾರ್ ಮಾರಾಟದ ಸಲುವಾಗಿ ಹೋಗಿದ್ದವ ಮತ್ತೆ ಮರಳಲೇ ಇಲ್ಲ. ಕೋಲ್ಕತ್ತಾದ ಎಂಬಿಎ ಕಾರ್ಯಕ್ರಮದ ಹಣಕ್ಕಾಗಿ ಕ್ಲಾಸಿಫೈಡ್ ವೆಬ್ಸೈಟ್ ನಲ್ಲಿ ಕಾರ್ ಮಾರಾಟಕ್ಕಿಟ್ಟಿದ್ದ. ಆನಂತರ ತನ್ನ ಕಾರನ್ನು ಕೊಂಡುಕೊಳ್ಳುವವರನ್ನು ಭೇಟಿಯಾಗಿ ಮಾರಾಟ ಮಾಡಲು ತಮಿಳುನಾಡಿನ ಗಡಿಗೆ ಹೋಗಿದ್ದ ಅಜಿತಾಬ್, ಅಲ್ಲಿಂದ ನಾಪತ್ತೆಯಾಗಿದ್ದ. ಇದಾದ ಬಳಿಕ ಪೋಷಕರು ಮತ್ತು ಸಹೋದರಿ ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದರು. ನಂತರ ಸಿಐಡಿಯ ಎಸ್ಐಟಿ ತಂಡ ತನಿಖೆ ನಡೆಸುತ್ತಿತ್ತು. ಆದರೆ ಅದರಿಂದ ಯಾವುದೇ ಫಲಿತಾಂಶ ಸಿಗದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದ ಅಜಿತಾಬ್ ಪೋಷಕರು ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ್ದರು.
ನ್ಯಾಯಾಲಯ ಕೂಡ ಪೋಷಕರ ಬೇಡಿಕೆಗೆ ಸಮ್ಮತಿಸಿ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಜಿತಾಬ್ ಪೋಷಕರು ಆತನ ಬಗ್ಗೆ ಮಾಹಿತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಪಾಟ್ನಾದಲ್ಲಿರುವ ಪೋಷಕರು ಈಗಲೂ ಮೇಲಿಂದ ಮೇಲೆ ಸಿಬಿಐ ಗೆ ಇಮೇಲ್ ಗಳನ್ನ ಕಳುಹಿಸುತ್ತಿದ್ದು, ಬೇಕಾದ ಡಿಜಿಟಲ್ ಎವಿಡೆನ್ಸ್ ಅನ್ನು ಈಗಾಗಲೇ ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಆದ್ರೆ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಅಜಿತಾಬ್ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂಬುದು ಪೋಷಕರ ಅಳಲಾಗಿದೆ. ಅಷ್ಟೇ ಅಲ್ಲ, ಪ್ರತಿ ಬಾರಿ ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದರೂ ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಕೋವಿಡ್ ಸಂದರ್ಭದಲ್ಲಿ ನಮಗೆ ಇದನ್ನು ಬಿಟ್ಟು ಬೇರೆ ಎಜೆನ್ಸಿಗೆ ಹೋಗಲು ಅವಕಾಶವೂ ಇಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.