ಬೆಂಗಳೂರು:ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸ್ವಲ್ಪವೂ ವಾಸನೆ ಬಾರದ ರೀತಿಯಲ್ಲಿ ತ್ಯಾಜ್ಯ ಸಂಸ್ಕರಿಸಲಾಗುತ್ತಿದೆ ಎಂದು ಚೆನ್ನೈನ ಪ್ರಗತಿ ಸಂಸ್ಥೆಯ ಸಂಸ್ಥಾಪಕ ಜೀವನ್ದಾಸ್ ರೈ ಹೇಳಿದ್ದಾರೆ. ಪ್ರಾಣಿ ತ್ಯಾಜ್ಯ ನಿರ್ವಹಣಾ ವಿಲೇವಾರಿ ಕುರಿತು ಮಂಗಳವಾರ ಅವರು ಪ್ರಾತ್ಯಕ್ಷಿಕೆ ನೀಡಿದರು. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹಾಗೂ ಇತರ ಅಧಿಕಾರಿಗಳ ತಂಡ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಮಾಹಿತಿ ಕಲೆ ಹಾಕಿತು.
ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೇಯರ್ ಗಂಗಾಂಬಿಕೆ, ಚೆನ್ನೈನಲ್ಲಿರುವ ಘಟಕ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ನೋಡಲು ಮೇಯರ್, ಆಡಳಿತ ಪಕ್ಷದ ಸದಸ್ಯರು, ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಮುಂದಿನ ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ನಗರದಲ್ಲಿ ಘಟಕ ನಿರ್ಮಿಸಲು ಸಂಸ್ಥೆಯವರು ಮುಂದೆ ಬಂದಿದ್ದು, ಘಟಕ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ರಾಣಿ ತ್ಯಾಜ್ಯವನ್ನು ಸಂಸ್ಕರಿಸಿ ಮೀನುಗಳ ಆಹಾರ ಮತ್ತು ಕೋಳಿ ಆಹಾರ ತಯಾರಿಸಲಾಗುತ್ತಿದೆ. ಆ ತ್ಯಾಜ್ಯದಿಂದ ಬರುವ ನೀರನ್ನು ಶುದ್ಧೀಕರಣ ಘಟಕದಿಂದ ಸಂಸ್ಕರಿಸಿ ಅದನ್ನು ಉದ್ಯಾನಗಳು ಸೇರಿದಂತೆ ಇತರೆ ಬಳಕೆಗೆ ಬಳಸಲಾಗುತ್ತಿದೆ ಎಂದು ಜೀವನ್ದಾಸ್ ತಿಳಿಸಿದರು.
ಪ್ರಾಣಿ ತ್ಯಾಜ್ಯದಲ್ಲಿ ಬಿಡುಗಡೆಯಾಗುವ ಎಣ್ಣೆ ಅಂಶವನ್ನು ಬಯೋ ಡೀಸೆಲ್ ಆಗಿ ಪರಿವರ್ತನೆ ಮಾಡಲಾಗುತ್ತದೆ. ಕೋಳಿ ಮತ್ತು ಮೀನು ತಯಾರಿಸುವ ಆಹಾರದಲ್ಲಿ ಎಣ್ಣೆ ಅಂಶ ಇರುವ ಹಾಗೂ ಎಣ್ಣೆ ಅಂಶ ಇಲ್ಲದ ಆಹಾರ ತಯಾರಿಸಲಾಗುತ್ತಿದ್ದು, ಒಂದು ಕೆಜಿಗೆ 30 ರಿಂದ 35 ರೂ. ವರೆಗೆ ದರ ನಿಗದಿಪಡಿಸಲಾಗಿದೆ ಎಂದರು.