ಬೆಂಗಳೂರು: ರಾಜಾಜಿನಗರ ಬಳಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ ರೀ ರೈಲು ಹಳಿ ತಪ್ಪಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯ ರಾಜಾಜಿನಗರದಿಂದ ಮಂತ್ರಿ ಸ್ಕ್ವೇರ್ ಮತ್ತು ಯಶವಂತಪುರ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಕೆಲಸಕ್ಕೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದೇ ಪರದಾಡಬೇಕಾಯಿತು.
ರಾಜಾಜಿನಗರ ಬಳಿ ಉಂಟಾದ ತಾಂತ್ರಿಕ ಸಮಸ್ಯೆ ಸರಿಪಡಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಸಮಸ್ಯೆ ಸರಿ ಹೋಗುವ ಸಾಧ್ಯತೆ ಇದೆ. ಅಲ್ಲಿಯವರಿಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಆಗಲಿದೆ. ಮೆಟ್ರೋ ಸಂಚಾರಕ್ಕೆ ಅಡೆ ತಡೆ ಆಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಗಮ್ಯ ಸ್ಥಾನಕ್ಕೆ ತಲುಪಲಾಗದೇ ಪರದಾಟ ನಡೆಸಬೇಕಿದೆ.
ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ತಾಂತ್ರಿಕ ತೊಂದರೆಯಿಂದಾಗಿ ನಾಗಸಂದ್ರ ಮತ್ತು ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್ನಿಂದ ರೇಷ್ಮೆ ಸಂಸ್ಥೆಯವರೆಗೆ ಮಾತ್ರ "ಹಸಿರು ಮಾರ್ಗ" ದ ಮೆಟ್ರೋ ಸಂಚರಿಸುತ್ತಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ಸಮಸ್ಯೆಯಾದಾಗ ರೀ ರೈಲು ಬಳಸಿ ಸಮಸ್ಯೆ ಸರಿಪಡಿಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಸಮಸ್ಯೆ ಸರಿಹೋಗುವ ಸಾಧ್ಯತೆಗಳು ಇವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಕಾರ್ಯಾಚರಣೆ: ಮೆಟ್ರೋ ಹಳಿಯ ಬದಿಯ ಗೋಡೆಗೆ ತಾಗಿ ನಿಂತಿರುವ ರೀ ರೈಲ್ಅನ್ನು ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಹಳಿಗೆ ಕೂರಿಸಲು ಎಂಜಿನಿಯರ್ಗಳು ಪ್ರಯತ್ನಿಸುತ್ತಿದ್ದಾರೆ. 200 ಟನ್ ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿರುವ ಕ್ರೇನ್ ಮೂಲಕ 17 ಟನ್ ಇರುವ ರೀ ರೈಲು ಕೆಳಗಿಳಿಸಲು ತಂತ್ರಜ್ಞರು ಹರಸಾಹಸಪಡುತ್ತಿದ್ದಾರೆ.