ಬೆಂಗಳೂರು:ಹವಾಮಾನ ವೈಪರೀತ್ಯ, ಮಧ್ಯವರ್ತಿಗಳ ಹಾವಳಿಯಿಂದ ಬೆಳೆಗೆ ಯೋಗ್ಯ ಬೆಲೆ ಸಿಗದೇ ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ತಲೆತಲೆಮಾರುಗಳಿಂದ ನಂಬಿಕೊಂಡು ಬಂದಿದ್ದ ಕೃಷಿಯನ್ನು ಕೈಬಿಟ್ಟು ಹಳ್ಳಿಗಳಿಂದ ನಗರಕ್ಕೆ ವಲಸೆ ಬರುತ್ತಿರುವ ರೈತರಿಗೆ ಇಲ್ಲೊಬ್ಬ ಯುವ ರೈತ ಮಾದರಿ.
ತಿಂಗಳಿಗೆ ಕೈತುಂಬ ಸಂಬಳ ನೀಡುತ್ತಿದ್ದ ಉದ್ಯೋಗ ತೊರೆದು ಹುಟ್ಟೂರಿನಲ್ಲಿ ಕೃಷಿಯಲ್ಲೇ ಏನಾದರೂ ಸಾಧಿಸಬೇಕೆಂದು ಛಲದಿಂದ ಮುನ್ನುಗ್ಗಿ ಯಶಸ್ವಿಯಾಗಿರುವ ಟೆಕ್ಕಿ ಇವರು. ಇವರ ಹೆಸರು ಮಧು ಕರಗುಂದ. ಊರು ಹಾಸನ ಜಿಲ್ಲೆಯ ಅರಸಿಕೆರೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಇವರು ಕೆಲಸ ತೊರೆದು 2018ರಲ್ಲಿ ಸ್ಥಾಪಿಸಿದ್ದ ತೆಂಗಿನ್ (Tengin) ಎಂಬ ಬ್ರ್ಯಾಂಡ್‌ನಡಿ ಕಂಪನಿ ತೆರೆದಿದ್ದರು. ಇದೀಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಇವರು ತೆಂಗಿನಿಂದ ಸಿದ್ಧಗೊಳಿಸಿರುವ ವಿವಿಧ ವಸ್ತುಗಳು, ತಿಂಡಿಗಳನ್ನು ಕಂಡು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಂಗಿನ ವಿವಿಧ ಉತ್ಪನ್ನಗಳು:ಮಧು ಕರಗುಂದ ಕೃಷಿಕನಾಗಿ ನಿರಂತರ ಸಂಶೋಧನೆ ಮಾಡಿ, ಉತ್ತಮ ಆರೋಗ್ಯಕ್ಕೆ ಬೇಕಾಗುವ ಪದಾರ್ಥಗಳು ಹಾಗೂ ತೆಂಗಿನಿಂದ ಬಳಸಬಹುದಾದ ಉಪಯುಕ್ತ ವಸ್ತುಗಳನ್ನು ತಯಾರಿಸಿದ್ದಾರೆ. ತಮ್ಮ ಸ್ವಂತ ಜಮೀನು ಐದು ಎಕರೆಯಲ್ಲಿ ಬೆಳೆದಿದ್ದ ತೆಂಗು ಹಾಗೂ ಕಾಲಕ್ರಮೇಣ ಸುತ್ತಮುತ್ತಲಿನ ರೈತರು ಬೆಳೆದ ತೆಂಗು ಖರೀದಿಸಿ ಮೌಲ್ಯವರ್ಧಿಸಿ ಪರಿಶುದ್ಧ ತೆಂಗಿನ ಎಣ್ಣೆ, ತೆಂಗಿನ ಸಾಬೂನು, ಎಣ್ಣೆರಹಿತ ತೆಂಗಿನ ಚಿಪ್ಸ್, ನೀರಾಬೆಲ್ಲ, ಗೃಹೋಪಯೋಗಿ ವಸ್ತುಗಳಾದ ತೆಂಗಿನ ಚಿಪ್ಪಿನಿಂದ ಮಾಡಲಾದ ವಿದ್ಯುತ್ ಲ್ಯಾಂಪ್ಸ್, ಅಗರಬತ್ತಿ ಸ್ಟ್ಯಾಂಡ್ ಹಾಗೂ ಕಾಫಿ ಲೋಟ ಸೇರಿದಂತೆ 15 ತರಹೇವಾರಿ ಕರಕುಶಲ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದಾರೆ.
"ರೈತರು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ ಪ್ಲಾಸ್ಟಿಕ್ಗೆ ಪರ್ಯಾಯವಾಗಿರುವ ತೆಂಗಿನಿಂದ ಗೃಹೋಪಯೋಗಿ ವಸ್ತುಗಳ ತಯಾರಿಕೆ ಸೂಕ್ತವಾದದು. ಜೊತೆಗೆ ದೈನಂದಿನ ದಿನಗಳಲ್ಲಿ ಆರೋಗ್ಯವನ್ನು ಸದೃಢಗೊಳಿಸಲು ತೆಂಗಿನ ಉತ್ಪನ್ನ ಪೂರಕವಾಗಿವೆ. ಹವಾಮಾನ ವೈಪ್ಯರೀತ ಹಾಗೂ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು ನಗರದ ಕಡೆ ವಲಸೆ ಹೋಗುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಉತ್ತರ ಆಹಾರ ಸೇವನೆ ಕಷ್ಟಕರವಾಗಲಿದೆ. ಸಾವಯವದಲ್ಲಿ ರೈತರು ಬೆಳೆದಿರುವ ಉತ್ಪನ್ನಗಳು ಮಾರುಕಟ್ಟೆಗೆ ಹೆಚ್ಚು ಬರಬೇಕು. ರೈತರ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುವಂತಾಗಬೇಕು" ಎಂದು ಅಶ್ವಿನ್ ಪುನೀತ್ ರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.