ಬೆಂಗಳೂರು:ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ತಡೆಯಾಜ್ಞೆ ತೆರವಾದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ, ವರ್ಗಾವಣೆ ಪ್ರಕ್ರಿಯೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಆಯಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಭಾಗೀಯ ಸಹನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಅ.1ರವರೆಗೆ ವರ್ಗಾವಣೆಗೆ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಅ.25ರಂದು ಪ್ರಕಟಿಸಬೇಕು. 2019ರಲ್ಲಿ ಕಡ್ಡಾಯ ವರ್ಗಾವಣೆಗೆ ಒಳಗಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅ.26ರಿಂದ, ಪ್ರೌಢ ಶಾಲಾ ಶಿಕ್ಷಕರಿಗೆ ಅ.28ರಿಂದ ಕೌನ್ಸಿಲಿಂಗ್ ನಡೆಸಬೇಕು ಎಂದು ಇಲಾಖೆ ಅಧಿಸೂಚನೆ ಹೊರಡಿಸಿದೆ.
ಹೊಸ ವೇಳಾಪಟ್ಟಿ ಪ್ರಕಾರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ತತ್ಸಮಾನ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಅ.25ರಿಂದ 2022ರ ಫೆಬ್ರವರಿ 26ರವರೆಗೂ ನಡೆಯಲಿದೆ.