ಬೆಂಗಳೂರು:ದೇಶದ ಪ್ರಗತಿಯಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ. ಆದರೆ ವಿದ್ಯಾರ್ಥಿಗಳ ಜೀವನ ಬೆಳಗಿಸಬಲ್ಲ ಶಾಲಾ,ಕಾಲೇಜುಗಳಲ್ಲಿ ಇಂದು ಶಿಕ್ಷಕರ ಕೊರತೆ ತುಂಬಾ ಇದೆ. ಅದರಲ್ಲಿಯೂ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಬೋಧಕರಿಲ್ಲದೇ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ.
ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲೊಂದಾದ ಮೈಸೂರು ವಿವಿಯಲ್ಲಿ, 2007 ರ ನಂತರ ಯಾವುದೇ ಬೋಧಕ ಹುದ್ದೆಗಳ ನೇಮಕಾತಿಯಾಗಿಲ್ಲ. 13 ವರ್ಷಗಳ ನಂತರ ಹಲವಾರು ಹುದ್ದೆಗಳು ಖಾಲಿಯಾಗಿದ್ದು, ಅತಿಥಿ ಉಪನ್ಯಾಸಕರಿಂದ ಪಾಠ ನಡೆಯುತ್ತಿದೆ.
ಕೊರೊನಾಗಿಂತ ಮುಂಚೆ ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ ನೀಡಿದ್ದು, ಒಟ್ಟು 280 ಹುದ್ದೆಗಳಿಗಾಗಿ ಅನುಮತಿ ನೀಡಿತ್ತು. ಆದರೆ ಕೊರೊನಾ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ತಾತ್ಕಾಲಿಕವಾಗಿ ತಡೆಯಲಾಗಿದೆ. ಇದೀಗ ವಿವಿಯಲ್ಲಿ 664 ಹುದ್ದೆಗಳಲ್ಲಿ 303 ಜನ ಬೋಧಕರಿದ್ದು, ಅರ್ಧದಷ್ಟು ಹುದ್ದೆಗಳು ಖಾಲಿ ಇವೆ.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಕೊರತೆ ಇನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 595 ಬೋಧಕ ಹುದ್ದೆಗಳಲ್ಲಿ 218 ಹುದ್ದೆಗಳು ಖಾಲಿಯಿದ್ದು, ಬೋಧಕೇತರ 1,074 ಹುದ್ದೆಗಳಲ್ಲಿ 645 ಹುದ್ದೆಗಳು ಖಾಲಿಯಿವೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಕೆಲಸ ನಡೆಸಲಾಗುತ್ತಿದೆ. ಅವಶ್ಯಕತೆಗನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ವಿವಿಯಲ್ಲಿ ಖಾಲಿ ನೇಮಕಾತಿ ಮಾಡಿಕೊಳ್ಳದಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಅನುಮತಿ ನೀಡಿದ ಬಳಿಕ ಎಲ್ಲಾ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಕೃವಿವಿ ತೀರ್ಮಾನಿಸಿದೆ.
ಇನ್ನು ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಇದೆ. ಇದು ಹೊಸ ಸಂಶೋಧನೆ, ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿನಿಯರು ವಂಚಿತರಾಗಲು ಕಾರಣವಾಗಿದ್ದು, ಇದರ ಜತೆ ನ್ಯಾಕ್ ಶ್ರೇಣಿ ಸಹ ಪಡೆಯಲು ಆಗಿಲ್ಲ. ಹೀಗಾಗಿ ಹೊಸ ಕೋರ್ಸ್ ಆರಂಭಿಸಲು ಹಿಂದೇಟು ಹಾಕುವಂತಾಗಿದೆ.
ಸದ್ಯ ವಿವಿಯಲ್ಲಿ ಬೋಧಕ ಸಿಬ್ಬಂದಿಯಲ್ಲಿ 11 ವಿಭಾಗಕ್ಕೆ ಒಬ್ಬರಂತೆ, ಸಹಾಯಕ ಪ್ರಾಧ್ಯಾಪಕ ಹಾಗೂ ಉಳಿದ 24 ಪ್ರಾಧ್ಯಾಪಕ ಹುದ್ದೆ ಸೇರಿ 35 ಬೋಧಕ ಹಾಗೂ 188 ಬೋಧಕೇತರ ಸಿಬ್ಬಂದಿ ಬೇಡಿಕೆಯ ಪರಿಸ್ಥಿತಿಯ ಪ್ರಸ್ತಾವನೆಯನ್ನು, ಸರ್ಕಾರಕ್ಕೆ ಕಳುಹಿಸಲಾಗಿದೆ.
ವಿಜಯಪುರ ಹೊರತುಪಡಿಸಿ ಮಂಡ್ಯ, ಸಿಂಧನೂರ ಹಾಗೂ ಉಡತಡಿ ಕೇಂದ್ರಗಳಲ್ಲಿ ಬೇಕಾಗುವ ಬೋಧಕ ಸಿಬ್ಬಂದಿ ಸೇರಿ, ಒಟ್ಟು 223 ಸಿಬ್ಬಂದಿ ಬೇಡಿಕೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಕೊರೊನಾ ಕಾರಣ ನೀಡಿ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದೆ. ನಾಲ್ಕು ತಿಂಗಳಿಂದ ಮಾತ್ರ ಹಂಗಾಮಿ ಕುಲಪತಿಗಳು ಮಹಿಳಾ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಅಂಥ ಶೈಕ್ಷಣಿಕ ಮಟ್ಟದಲ್ಲಿ ಬದಲಾವಣೆ ನಡೆದಿಲ್ಲ.
ಒಟ್ಟಾರೆಯಾಗಿ ರಾಜ್ಯದ ವಿವಿಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ಮೊದಲಿನಿಂದಲೂ, ಕುಂಠಿತವಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ತುಂಬಾ ಪರಿಣಾಮ ಬೀರಲಿದೆ.