ಬೆಂಗಳೂರು : ದ್ವಾಪರದಲ್ಲಿ ಆತ್ಮ, ತ್ರೇತಾಯುಗದಲ್ಲಿ ಆತ್ಮ ಪರಮಾತ್ಮ ಆಯ್ತು. ಕಲಿಯುಗದಲ್ಲಿ ಗುರುವಿನ ಮುಖಾಂತರ ದೇವರು ರೂಪ ತಾಳಿದ್ದಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶಿಕ್ಷಕರನ್ನು ಬಣ್ಣಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಬಳಿಕ ಮಾತನಾಡಿದ ಅವರು, ದೇವರ ನಂತರ ಗುರುನೇ, ಗುರುವಿಲ್ಲದೆ ದೇವರೂ ಸಿಗೋದಿಲ್ಲ ಅಂತಾರೆ. ಅಂತಹ ಸ್ಥಾನ ನೀವು ಪಡೆದುಕೊಂಡಿದ್ದೀರಾ ಅಂದರೆ ಪುಣ್ಯಾತ್ಮರು.
ನೀವೆಲ್ಲಾ ಸರಸ್ವತಿಯ ಸ್ವರೂಪ. ಸ್ವರಸ್ವತಿ ವಾಹನ ಹಂಸ. ಶುಭ್ರತೆಯ ಪ್ರತೀಕ ಹಂಸ. ಹಂಸ ತೂಕವಿರುವ ಪಕ್ಷಿ. ಅತೀ ಎತ್ತರಕ್ಕೆ ಹಾರುವ ಪಕ್ಷಿ ಎಂದರೆ ಹಂಸ. ನೀವು ಸರಸ್ವತಿಗೆ ಸ್ವರೂಪ. ಈ ವಾಹನದಲ್ಲಿ ಕೂರಿಸಿಕೊಂಡು ಮಕ್ಕಳನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲಿರಿ ನೀವು ಎಂದು ಬಣ್ಣಿಸಿದರು.
ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗುರುವಿನ ಮಹತ್ವ ಸ್ಮರಿಸಿದ ಸಿಎಂ ಬೊಮ್ಮಾಯಿ.. ಶಿಕ್ಷಕನಿಗೆ ಮಕ್ಕಳಿಗೆ ಪ್ರಶ್ನೆ ಕೇಳುವುದು ನಮ್ಮ ಹಕ್ಕು ಎಂಬ ಭಾವನೆ ಇರುತ್ತದೆ. ವಾಸ್ತವದಲ್ಲಿ ನೋಡುವುದಾದರೆ, ಶಿಕ್ಷಕ ತಿಳಿದಿರುತ್ತಾನೆ. ವಿದ್ಯಾರ್ಥಿ ತಿಳಿದಿರುವುದಿಲ್ಲ. ಹಾಗಾಗಿ, ವಿದ್ಯಾರ್ಥಿ ತನ್ನ ತಿಳುವಳಿಕೆ ಹೆಚ್ಚಿಸಲು ಪ್ರಶ್ನೆ ಕೇಳುವ ಹಕ್ಕು ಹೊಂದಿದ್ದಾನೆ ಹೊರತು ಶಿಕ್ಷಕರಿಗಿಲ್ಲ.
ಮಕ್ಕಳು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ್ರೆ ಹೇ ಸುಮ್ನಿರು ಅಂತಾರೆ. ಯಾವ ಗುರುಗಳು ಮಕ್ಕಳಿಗೆ ಮುಕ್ತವಾದ ಅವಕಾಶ, ಆತ್ಮಸ್ತೈರ್ಯ ಕೊಟ್ಟು ಪ್ರಶ್ನೆ ಕೇಳಲು ಪ್ರತ್ಸಾಹಿಸುತ್ತಾನೋ ಅವರೇ ನಿಜವಾದ ಗುರು ಎಂದರು.
ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ 21ನೇ ಶತಮಾನ ಜ್ಞಾನದ ಕಾಲ. ಜ್ಞಾನ ಹೋಗಿ ವಿಜ್ಞಾನ ಬಂದಿದೆ. ವಿಜ್ಞಾನ ಹೋಗಿ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ ಬಂದಿದೆ. ವೇಗವಾಗಿ ಸಾಗ್ತಾ ಇದೆ. ಯಾರೂ ವೇಗವನ್ನು ಅಳವಡಿಸಿಕೊಳ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗ್ತಾರೆ. ಶಿಕ್ಷಕರು ಉತ್ತಮ ವಿದ್ಯಾರ್ಥಿಗಳು ಆದಾಗ ಉತ್ತಮ ಶಿಕ್ಷಕರು ಆಗ್ತಾರೆ.
ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ನಾವೆಲ್ಲಾ ಚಿಕ್ಕವಯಸ್ಸಿನಲ್ಲಿ ಮುಗ್ದರಾಗಿದ್ದೆವು. ಅದೇ ಸಮಯದಲ್ಲಿ ಅವರಿಗೆ ತಿಳಿದುಕೊಳ್ಳುವ ತವಕ ಇರುತ್ತದೆ. ಇವರನ್ನೂ ಅವರಲ್ಲಿ ಉಳಿಸುವುದು ಚಾಲೆಂಜ್. ಆಗ ಅವರು ಉತ್ತಮ ಸಾಧಕರು ಆಗ್ತಾರೆ ಎಂದರು.
ಸಾತ್ವಿಕತೆ ತುಂಬಿರುವ ಅಪರೂಪದ ನಾಯಕ ರಾಧಾಕೃಷ್ಣನ್. ಅವರಿಗೆ ಗೌರವ ನೀಡುವ ಕೆಲಸ ದಿನಾಚರಣೆಯಿಂದ ಮಾಡಲಾಗುತ್ತಿದೆ. ಗುರುವಿಲ್ಲದೆ ನಾಗರಿಕ ಸಮಾಜ ಕಟ್ಟಲು ಸಾಧ್ಯವಿಲ್ಲ. ಆಧ್ಯಾತ್ಮಿಕ ಗುರು ಇರಬಹುದು, ಮಾರ್ಗದರ್ಶನ ಮಾಡಿದ ಗುರು ಇರಬಹುದು, ಅವರೆಲ್ಲರೂ ಗುರುಗಳೇ.. ಒಮ್ಮೆ ವಿದ್ಯಾರ್ಥಿ ಆದರೆ ಸಾಯುವವರೆಗೂ ವಿದ್ಯಾರ್ಥಿಗಳೇ ಎಂದರು.
ಇದೇ ವೇಳೆ ಮಾತನಾಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಕೊರೊನಾ ಸಮಯದಲ್ಲಿ ಅನೇಕ ಶಿಕ್ಷಕರು ಬಂದು ಶಿಕ್ಷಣ ಹೇಳಿಕೊಟ್ಟಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡರು. ಶಾಲೆ ಪ್ರಾರಂಭ ಮಾಡಬೇಕೋ ಬಿಡಬೇಕೋ ಎಂಬ ಗೊಂದಲ ಇತ್ತು. ಆದರೆ, ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಶಿಕ್ಷಕರು ಬದ್ಧರಾದರು. ಎಸ್ಎಸ್ಎಲ್ಸಿ ಎಕ್ಸಾಂ ಮಾಡುವುದು ಸುಮ್ಮನೆ ಮಾತಲ್ಲ. ಅಷ್ಟು ಧೈರ್ಯವಾಗಿ ಬಂದು ಕೆಲಸ ಮಾಡಿದರು ಎಂದರು.
ಕೊರೊನಾ ಸಮಯದಲ್ಲೂ ಮಕ್ಕಳನ್ನು ತಯಾರು ಮಾಡಿದ್ದರು. ಅನೇಕ ಶಾಲೆಗಳಿಗೆ ಹೋಗುವ ಪ್ರಯತ್ನ ಮಾಡಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರು ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಅದನ್ನು ಸರಿ ಮಾಡುವ ಕೆಲಸ ಮಾಡೋಣ. ಈ ಬಗ್ಗೆ ಸಿಎಂ ಬಳಿ ಕೂಡ ಮಾತನಾಡಿದ್ದೇನೆ ಎಂದರು. ಇದೇ ವೇಳೆ ಸಿಎಂ, ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಲು ರೂಪಿಸಿರುವ ನಮ್ಮ ಶಾಲೆ ನನ್ನ ಕೊಡುಗೆ ತಂತ್ರಾಂಶಕ್ಕೆ ಚಾಲನೆ ನೀಡಿದರು.
ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ: 2021-22ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆಯಾದ 20 ಮಂದಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕರಿಗೆ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಆಯ್ಕೆಯಾದ 12 ರಾಜ್ಯ ಮಟ್ಟದ ಉತ್ತಮ ಶಿಕ್ಷಕರಿಗೆ ಸಿಎಂ ಪ್ರಶಸ್ತಿ ಪ್ರದಾನ ಮಾಡಿದರು.
ಇದನ್ನೂ ಓದಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ..