ಬೆಂಗಳೂರು: ದೇಶದ ಭವಿಷ್ಯವನ್ನು ಬರೆಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೋವಿಡ್ ಸಂದರ್ಭದಲ್ಲಿ ಮತ್ತು ನಂತರದ ದಿನಗಳಲ್ಲಿ ಶಿಕ್ಷಣದ ಮುಂದುವರಿಕೆ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೋವಿಡ್-19 ಕಾರಣ ಉಂಟಾದ ಕಲಿಕಾ ಹಿನ್ನೆಡೆ ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ಇಡೀ ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಕೇಂದ್ರ ಶಿಕ್ಷಣ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಕಲಿಕಾ ಚೇತರಿಕೆಗಾಗಿ ಬೇಸಿಗೆ ರಜೆ ಕಡಿತಗೊಳಿಸಿ 15 ದಿನಗಳ ಮೊದಲೇ ಶಾಲೆಗಳನ್ನು ಆರಂಭಿಸಲಾಯಿತು. ಶಿಕ್ಷಕರು ಸಂಪೂರ್ಣ ಸಹಕಾರ ನೀಡಿದರು.
ಕೋವಿಡ್-19 ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳಲ್ಲಿ ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಸರ್ಕಾರದಿಂದ ನೀಡಲಾದ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶಿಕ್ಷಕರು ಶ್ರೇಷ್ಠ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಭವಿಷ್ಯದ ಪ್ರಜೆಗಳಿಗೆ ಪಾಠ ಮಾಡುವ ಮೂಲಕ ದೇಶದ ಭವಿಷ್ಯ ಬರೆಯುವವರು ಶಿಕ್ಷಕರು ಎಂದು ಭಾರತ ರತ್ನ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರು ಹೇಳಿದ್ದಾರೆ. ಪ್ರತಿಯೊಬ್ಬ ಶಿಕ್ಷಕ/ಶಿಕ್ಷಕಿ ಕೂಡ ತೋರಿದ ಮಾರ್ಗದರ್ಶನದಲ್ಲಿ ನಡೆಯಬೇಕು. ನಮ್ಮ ರಾಜ್ಯದ ಶಿಕ್ಷಕರು ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೌನ್ಸೆಲಿಂಗ್ ಮೂಲಕ ಶಿಕ್ಷಕರ ವರ್ಗಾವಣೆ: ಶಿಕ್ಷಕರ ಮನವಿಯಂತೆ 23 ಸಾವಿರ ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಕೌನ್ಸೆಲಿಂಗ್ ದಿನವೇ ಆದೇಶ ಪ್ರತಿ ನೀಡಲಾಗಿದೆ. ಪಿಯು ಉಪನ್ಯಾಸಕರ ವರ್ಗಾವಣೆಯನ್ನು ಮಾಡಲಾಗುತ್ತದೆ. ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಬಡ್ತಿ ಪ್ರಕ್ರಿಯೆ ನಡೆಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸಗಳು ತ್ವರಿತಗತಿಯಲ್ಲಿ ನಡೆಸಲು, ಪಾರದರ್ಶಕತೆ ತರಲು ಹೊಸ ಪ್ರಯತ್ನಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.