ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಿಳಿದ ಶಿಕ್ಷಕರು, ರೈತರು: ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಶಿಕ್ಷಕರ ನೇಮಕಾತಿ ಆದೇಶ ಪ್ರತಿಗಾಗಿ ಶಿಕ್ಷಕರು ಹಾಗೂ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರೈತರು ರಾಜ್ಯ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

teachers-and-farmers-protesting-at-freedom-park-against-state-government
ರಾಜ್ಯ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಿಳಿದ ಶಿಕ್ಷಕರು, ರೈತರು: ಬೇಡಿಕೆಗಳ ಈಡೇರಿಕೆಗೆ ಒತ್ತಾಯ

By

Published : Jul 3, 2023, 3:18 PM IST

ಬೆಂಗಳೂರು: ಹೊಸ ಸರ್ಕಾರದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ, ಮತ್ತೊಂದೆಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಳ ಕಾವು ಜೋರಾಗಿದೆ‌. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಮಳೆಯ ಅಭಾವವಾಗಿರುವುದರಿಂದ ರಾಜ್ಯದಲ್ಲಿ ಬರಗಾಲ ಎಂದು ಘೋಷಿಸುವ ಮೂಲಕ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸುತ್ತಿವೆ.

ಸರ್ಕಾರದ ಇಬ್ಭಗೆಯ ನೀತಿ ವಿರುದ್ಧ ಶಿಕ್ಷಕರ ಭವಿಷ್ಯ ಅತಂತ್ರ:2022ರ ಮೇ ನಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದಿದ್ದ 70 ಸಾವಿರ ಅಭ್ಯರ್ಥಿಗಳಲ್ಲಿ 13,352 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆ ಪೈಕಿ ನೇಮಕಾತಿಯಲ್ಲಿ ಕಾನೂನು ಗೊಂದಲದವಿದೆ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣದಿಂದಾಗಿ ಯಾವುದೇ ಕಾನೂನು ತೊಡಕಿಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಗಳನ್ನು ಪಡೆದಿರುವ ಸರ್ಕಾರ, ಆದೇಶ ಪ್ರತಿ ನೀಡುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಪ್ರತಿನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿಯೂ ಅಭ್ಯರ್ಥಿಗಳ ದಾಖಲಾತಿಗಳ ನೈಜತೆಯ ಪರಿಶೀಲನೆ ಪ್ರಾರಂಭಿಸಿದರೂ ಸಹ ನೇಮಕಾತಿ ಪ್ರಕ್ರಿಯೆ ಚುರುಕುಗೊಳ್ಳುತ್ತಿಲ್ಲ. ಪರೀಕ್ಷೆ ನಡೆದು ವರ್ಷವೇ ಕಳೆದರೂ ಕೂಡಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹಾಗೂ ಸ್ಥಳ ನಿಯುಕ್ತಿಗೊಂಡಿರುವುದಿಲ್ಲ. ಇದರಿಂದಾಗಿ ಖಾಸಗಿ ಶಾಲೆಗಳಲ್ಲಿ ನಿರ್ವಹಿಸುತ್ತಿದ್ದ ತಾತ್ಕಾಲಿಕ ಉದ್ಯೋಗವೂ ಇಲ್ಲದಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಮೂಲ ದಾಖಲಾತಿಗಳನ್ನ ಇಲಾಖೆಯ ವಶಕ್ಕೆ ನೀಡಿರುವುದರಿಂದ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಆಯ್ಕೆಯಾದ ಶಿಕ್ಷಕರು ನೇಮಕಾತಿ ಆದೇಶ ಸಿಗದಿರುವುದರಿಂದ ತಮ್ಮ ತಮ್ಮ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಚುನಾವಣಾ ನೀತಿ ಸಂಹಿತೆ ಸಮೀಪದಲ್ಲೇ ಇರುವುದರಿಂದ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಅಭ್ಯರ್ಥಿಗಳು ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಬರಗಾಲವೆಂದು ಘೋಷಿಸುವಂತೆ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯ:ಮತ್ತೊಂದೆಡೆ, ರಾಜ್ಯದಲ್ಲಿ ಬರಗಾಲವೆಂದು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೂರಾರು ಜನ ರೈತರು, ರೈತ ಮಹಿಳೆಯರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ನೀರಾವರಿ ಸಮಸ್ಯೆ ಎದುರಾಗಿದ್ದು ಖುದ್ದು ಮುಖ್ಯಮಂತ್ರಿಗಳೇ ರಾಜ್ಯ ಪ್ರವಾಸ ಕೈಗೊಂಡು ರೈತರು ಅನುಭವಿಸುತ್ತಿರುವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬರಗಾಲವೆಂದು ಘೋಷಿಸಬೇಕು. ಮತ್ತು ರೈತರ ಸಾಲ ಮನ್ನಾ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ‌.

ಬಜೆಟ್ ಅಧಿವೇಶನ ಆರಂಭವಾದ ಬೆನ್ನಲ್ಲೇ ಪ್ರತಿಭಟನೆಗಳೂ ಅರಂಭವಾಗಿರುವುದು ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಈ ಸವಾಲುಗಳನ್ನು ಹೇಗೆ ನಿಭಾಯಸಲಿದೆ ಎಂಬುದನ್ನ ಕಾದು ನೋಡಬೇಕಿದೆ

ಇದನ್ನೂ ಓದಿ:Vidhana Parishad Oath: ವಿಧಾನಪರಿಷತ್​ಗೆ ನೂತನವಾಗಿ ಆಯ್ಕೆಯಾದ ಎಮ್​ಎಲ್​ಸಿಗಳ ಪ್ರಮಾಣವಚನ ಸ್ವೀಕಾರ

ABOUT THE AUTHOR

...view details